ಬೆಂಗಳೂರು: ರೈತರ ಸಮಸ್ಯೆಗಳು ಸೇರಿದಂತೆ ಸದನದಲ್ಲಿ ಚರ್ಚಿಸಲಾದ ಯಾವುದೇ ವಿಷಯಕ್ಕೆ ಸರಕಾರ ಸರಿಯಾದ ಮಾಹಿತಿಯೊಂದಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ನೀತಿಗಳು ಮತ್ತು ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದರು.
ಕಾಡುಗೋಡಿ ಜಮೀನು ಕಸಿತ: ಸರಕಾರದ ವಿಫಲತೆ
ಕಾಡುಗೋಡಿಯಲ್ಲಿ ದಲಿತರ ಜಮೀನು ಕಸಿದುಕೊಳ್ಳುವ ಪ್ರಕರಣದಿಂದ ಹಿಡಿದು ಕಾನೂನು-ಸುವ್ಯವಸ್ಥೆ, ರೈತರ ಸಮಸ್ಯೆಗಳು, ಒಳ ಮೀಸಲಾತಿ, ಮತ್ತು ಕಾಲ್ತುಳಿತ ಸಾವುಗಳ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದೇವೆ ಎಂದು ನಾರಾಯಣಸ್ವಾಮಿ ಹೇಳಿದರು. “ಕಾಲ್ತುಳಿತ ದುರ್ಘಟನೆಯನ್ನು ಸರಕಾರ ಒಪ್ಪಿಕೊಳ್ಳಲು ಸಿದ್ಧವಿಲ್ಲ. 11 ಜನರ ಸಾವಿಗೆ ಕಾರಣವಾದ ಈ ಘಟನೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ಪೊಲೀಸರ ಮೇಲೆ ಹಾಕಿದ್ದಾರೆ. ಉಪ ಮುಖ್ಯಮಂತ್ರಿಗಳು ‘ಅಚಾತುರ್ಯ’ ಎಂದು ಕರೆದಿದ್ದಾರೆ. ಆದರೆ ಇದು ಕೇವಲ ಪೊಲೀಸರ ತಪ್ಪಲ್ಲ, ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳ ವೈಫಲ್ಯ” ಎಂದು ಆಕ್ಷೇಪಿಸಿದರು.
ಗೌಪ್ಯತೆಯ ಕೊರತೆ: ಸದನದ ಚರ್ಚೆಗೆ ಅವಕಾಶವಿಲ್ಲ
ಒಳ ಮೀಸಲಾತಿ ವಿಷಯದಲ್ಲಿ ಸರಕಾರದ ಗೌಪ್ಯತೆಯ ಕೊರತೆಯನ್ನು ಎತ್ತಿ ತೋರಿಸಿದ ನಾರಾಯಣಸ್ವಾಮಿ, “ಸದನದಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಸದನದ ಚರ್ಚೆಗೆ ಅವಕಾಶ ನೀಡದೆ ಬಹಿರಂಗಪಡಿಸಲಾಗಿದೆ. ಸದನದಲ್ಲಿ ಕೊಟ್ಟ ಹೇಳಿಕೆ ಹಿಂದಿನ ದಿನವೇ ಸೋರಿಕೆಯಾಗಿತ್ತು. ಇದು ಸರಕಾರದ ಗೌಪ್ಯತೆಯ ಕೊರತೆಯನ್ನು ತೋರಿಸುತ್ತದೆ” ಎಂದು ಟೀಕಿಸಿದರು.
ರಾಜಕೀಯ ತೀರ್ಮಾನ ಮತ್ತು ಮತಬ್ಯಾಂಕ್ ರಾಜಕಾರಣ
ಒಳ ಮೀಸಲಾತಿ ವಿಷಯದಲ್ಲಿ ಸರಕಾರ ರಾಜಕೀಯ ತೀರ್ಮಾನ ಕೈಗೊಂಡಿದೆ ಎಂದು ಆರೋಪಿಸಿದ ಅವರು, “ನ್ಯಾ. ಸದಾಶಿವ ಆಯೋಗ, ಮಾಧುಸ್ವಾಮಿ ವರದಿ, ಮತ್ತು ನ್ಯಾ. ನಾಗಮೋಹನ್‍ದಾಸ್ ಆಯೋಗದ ವರದಿಗಳನ್ನು ಗಣನೆಗೆ ತೆಗೆದುಕೊಳ್ಳದೆ, ಕಾಂಗ್ರೆಸ್ ಸರಕಾರ ತನ್ನ ಪಕ್ಷಕ್ಕೆ ಬೇಕಾದಂತೆ ತೀರ್ಮಾನ ಕೈಗೊಂಡಿದೆ. ಇದು ಕೇವಲ ಮತಬ್ಯಾಂಕಿನ ರಾಜಕಾರಣ” ಎಂದು ವಾಗ್ದಾಳಿ ನಡೆಸಿದರು.
ನ್ಯಾ. ನಾಗಮೋಹನ್‍ದಾಸ್ ಆಯೋಗವು 5 ಗುಂಪುಗಳಾಗಿ ವಿಂಗಡಿಸಿದ್ದರೂ, ಸರಕಾರ 3 ಗುಂಪುಗಳನ್ನಾಗಿ ಮಾಡಿದೆ. “115 ಕೋಟಿ ರೂ. ಖರ್ಚು ಮಾಡಿದ ಆಯೋಗದ ವರದಿಯನ್ನು ತಿರಸ್ಕರಿಸಿ, ಒಂದೇ ದಿನದಲ್ಲಿ ತೀರ್ಮಾನ ಕೈಗೊಂಡಿರುವುದು ಸರಕಾರದ ಒಳ ಮೀಸಲಾತಿಗೆ ಸಂಬಂಧಿಸಿದ ಗಂಭೀರತೆಯ ಕೊರತೆಯನ್ನು ತೋರಿಸುತ್ತದೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
59 ಜಾತಿಗಳಿಗೆ ನ್ಯಾಯವಿಲ್ಲ
“59 ಜಾತಿಗಳು ಇಂದು ಬೀದಿಯಲ್ಲಿ ನಿಂತಿವೆ. ಈ ಸಣ್ಣಪುಟ್ಟ ಜಾತಿಗಳಿಗೆ ನಾಯಕತ್ವವಿಲ್ಲ, ವ್ಯವಸ್ಥೆಯಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ್ 101 ಜಾತಿಗಳಿಗೆ ನ್ಯಾಯ ಕೊಡಬೇಕೆಂದು ಹೋರಾಟ ನಡೆಸಿದ್ದರು. ಆದರೆ, 59 ಜಾತಿಗಳಿಗೆ ಸರಕಾರ ಯಾವ ಸವಲತ್ತು ನೀಡಿದೆ? ಯಾರ ಜೊತೆ ಸೇರಿಸಿದೆ? ಯಾವುದೇ ಸ್ಪಷ್ಟತೆ ಇಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕುಲಶಾಸ್ತ್ರ ಅಧ್ಯಯನದ ಕೊರತೆ
ಅಲೆಮಾರಿ ಮತ್ತು ಸಣ್ಣಪುಟ್ಟ ಸಮುದಾಯಗಳನ್ನು ಅವರ ಮೂಲ ಜಾತಿಗೆ ಸೇರಿಸಬೇಕಿತ್ತು ಎಂದು ತಿಳಿಸಿದ ನಾರಾಯಣಸ್ವಾಮಿ, “ಕುಲಶಾಸ್ತ್ರ ಅಧ್ಯಯನ ನಡೆಸಿದ್ದರೆ, ಯಾವ ಜಾತಿ ಯಾವ ಮೂಲಕ್ಕೆ ಸೇರಿದೆ ಎಂಬುದು ಸರಕಾರಕ್ಕೆ ತಿಳಿಯುತ್ತಿತ್ತು. ಆದರೆ ಸರಕಾರಕ್ಕೆ ಯಾರ ಬಲ, ಯಾರ ಎಡ, ಯಾರ ಸ್ಪರ್ಶಿಗಳು ಎಂಬುದೇ ಗೊತ್ತಿಲ್ಲ” ಎಂದು ಟೀಕಿಸಿದರು.
ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕರುಣಾಕರ ಖಾಸಲೆ
ರಾಜ್ಯ ಮಾಧ್ಯಮ ಸಂಚಾಲಕರು, ಬಿಜೆಪಿ ಕರ್ನಾಟಕ