ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಟ್ಟಿದೆ ಎಂದು ವಿಧಾನ ಪರಿಷತ್ ಸಭಾನಾಯಕರು ಹಾಗೂ ಸಚಿವ ಬೋಸರಾಜು ತಿಳಿಸಿದ್ದಾರೆ.
ಕ್ರೀಡೆಯಲ್ಲಿ ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ಸರ್ಕಾರಿ ಶಾಲಾ-ಕಾಲೇಜುಗಳ ಕ್ರೀಡಾಪಟುಗಳನ್ನು ಗುರುತಿಸಿ, ಅಂತಹ ಶಾಲೆಗಳಿಗೆ ರೂ.1 ಲಕ್ಷ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಎಸ್.ಎಲ್. ಭೋಜೇಗೌಡ ಹಾಗೂ ಶ್ರೀ ಕೆ.ವಿವೇಕಾನಂದ ಅವರು ನಿಯಮ-72ರ ಅಡಿಯಲ್ಲಿ ಗಮನಸೆಳೆಯುವ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಸಭಾನಾಯಕರು ಉತ್ತರಿಸುತ್ತಾ, “ನಮ್ಮೂರ ಶಾಲೆ, ನಮ್ಮೂರ ಯುವಜನರು” ಯೋಜನೆಯಡಿ ಕ್ರೀಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.
ಇದರಿಂದಾಗಿ, ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಉತ್ಸಾಹದೊಂದಿಗೆ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ, 2024-25ನೇ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ (ಕ್ರೈಸ್) 159 ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗಿದೆ.
ಪ್ರತಿ ವಸತಿ ಶಾಲೆಗೆ ರೂ.84,010/- ಗಳಂತೆ ಒಟ್ಟು ರೂ.1,33,57,590/- ವೆಚ್ಚದಲ್ಲಿ ಕ್ರೀಡಾ ಸಾಮಗ್ರಿಗಳನ್ನು ಪೂರೈಸಲಾಗಿದೆ. ಈ ಮೂಲಕ, ವಸತಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕ್ರೀಡೆ ಕುರಿತ ಆಸಕ್ತಿ ಹೆಚ್ಚಿಸುವುದರೊಂದಿಗೆ, ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶವಿದೆ.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗಲಿದೆ.