ಮಠಗಳೇ ಬಡವರ ಮಕ್ಕಳಿಗೆ ಶಿಕ್ಷಣದ ಆಸರೆ
ಬೆಂಗಳೂರು: ರಾಜ್ಯ ಸರ್ಕಾರ ಒಂದೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವಾಗ, ಮಠಗಳು ಮಾತ್ರ ಬಡವರಿಗೆ, ದುರ್ಬಲ ವರ್ಗದ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮಹತ್ತರ ಕಾರ್ಯ ಮಾಡುತ್ತಿವೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ 17ನೇ ಬಿಜಿಎಸ್ ಸ್ಥಾಪನಾ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, “ರೈತರು, ಬಡವರು, ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಓದುತ್ತಿದ್ದ ಸರ್ಕಾರಿ ಶಾಲೆಗಳಿಗೆ ಸರ್ಕಾರವೇ ಬೀಗ ಜಡಿಯುತ್ತಿದೆ. ಆದರೆ ಇಂತಹ ಕಷ್ಟದ ಸಮಯದಲ್ಲಿ ಮಠಗಳು ಮಾತ್ರ ನಾಡಿನ ಮಕ್ಕಳಿಗೆ ಶಿಕ್ಷಣದ ದೀಪವನ್ನು ಬೆಳಗಿಸುತ್ತಿವೆ” ಎಂದು ಕಿಡಿ ಕಾರಿದರು.
ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭವಾದರೂ ಅವುಗಳನ್ನು ದಕ್ಷತೆಯಿಂದ ನಿರ್ವಹಿಸುವುದು ಅತ್ಯಂತ ಕಠಿಣ ಕೆಲಸ ಎಂದ ಅವರು, “ದೂರದೃಷ್ಟಿ, ಸಮಾಜದ ಬಗ್ಗೆ ಆಳವಾದ ಕಾಳಜಿ ಇದ್ದಾಗ ಮಾತ್ರ ಇದು ಸಾಧ್ಯ. ಆದಿಚುಂಚನಗಿರಿ ಮಠ ಸೇರಿದಂತೆ ರಾಜ್ಯದ ಮಠಗಳು ಈ ದಿಕ್ಕಿನಲ್ಲಿ ಅಪೂರ್ವ ಕಾರ್ಯ ಮಾಡುತ್ತಿವೆ. ಗುಣಾತ್ಮಕ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನೂ ಬಿತ್ತುತ್ತಿವೆ” ಎಂದು ಶ್ಲಾಘಿಸಿದರು.
“ಮುಂದಿನ ಪೀಳಿಗೆಗೆ ಬೆನ್ನೆಲುಬಾಗದ, ಗಟ್ಟಿಯಾದ ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ಬೇಕು. ಆ ನಿಟ್ಟಿನಲ್ಲಿ ಆದಿಚುಂಚನಗಿರಿ ಮಠ ಮುಂಚೂಣಿಯಲ್ಲಿದೆ” ಎಂದು ಕುಮಾರಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುತ್ತೂರು ಶ್ರೀಗಳು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ, ಗ್ಯಾರಂಟಿ ನ್ಯೂಸ್ ಮುಖ್ಯಸ್ಥ ಶಿವಸ್ವಾಮಿ, ಹಿರಿಯ ನಟಿ ಮಾಲಾಶ್ರೀ, ನಟಿ ಆರಾಧನಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.











