ಬಿಳಾಗಿ: ರಾಜ್ಯದ 16,500 ಸರ್ಕಾರಿ ಶಾಲೆಗಳಿಗೆ ಹಳೆಯ ಅಲ್ಯೂಮಿನಿಯಂ ಪಾತ್ರೆಗಳ ಬದಲು ಹೊಸ ಅಡುಗೆ ಪಾತ್ರೆಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಬಿಳಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಹಳೆಯ ಪಾತ್ರೆಗಳಿಗೆ ಬದಲು ಹೊಸ ಪಾತ್ರೆಗಳು
“ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಆಹಾರ ತಯಾರಿಸುವುದು ಆರೋಗ್ಯಕ್ಕೆ ಹಾನಿಕಾರಕ. ಮಕ್ಕಳಿಗೆ ದಿನಂಪ್ರತಿ ನೀಡುವ ಆಹಾರ ಗುಣಮಟ್ಟದಾಗಿರಬೇಕಾದ್ದರಿಂದ, ಹೊಸ ಪಾತ್ರೆಗಳ ಬಳಕೆಯತ್ತ ನಾವು ಸಾಗುತ್ತಿದ್ದೇವೆ,” ಎಂದು ಮಧು ಬಂಗಾರಪ್ಪ ಹೇಳಿದರು. ಮೊಟ್ಟೆ, ಬಾಳೆಹಣ್ಣು ಮುಂತಾದ ಪೋಷಕಾಂಶದ ಆಹಾರಗಳನ್ನು ಉತ್ತಮ ಪಾತ್ರೆಗಳಲ್ಲಿ ತಯಾರಿಸಬೇಕು ಎಂಬ ಉದ್ದೇಶವಿದೆ ಎಂದರು.
ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವ ಪ್ರಯತ್ನ
ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೆಳೆಯಲು ಸರ್ಕಾರ ನಾನಾ ಕ್ರಮಗಳನ್ನು ಕೈಗೊಂಡಿದೆ. “ದೇವಾಲಯಗಳಲ್ಲಿ ಆರಂಭಗೊಂಡ ಈ ಶಾಲೆಗಳಲ್ಲಿ ಓದಿ ಅನೇಕರು ಉನ್ನತ ಸ್ಥಾನ ತಲುಪಿದ್ದಾರೆ. ನನ್ನ ತಂದೆ ಬಂಗಾರಪ್ಪನವರು ಹಾಗೂ ಸಿಎಂ ಸಿದ್ದರಾಮಯ್ಯನವರು ಸಹ ಸರ್ಕಾರಿ ಶಾಲೆಗಳ ಪಠಿತರು,” ಎಂದು ಹೆಮ್ಮೆಪಟ್ಟ ಸಚಿವರು ಹೇಳಿದರು.
ಎಲ್.ಕೆ.ಜಿ ಶಾಲೆಗಳ ಆರಂಭ ಶೀಘ್ರದಲ್ಲಿ
ಅಂಗನವಾಡಿಗಳಿಗೆ ಅಡ್ಡಿ ಆಗದ ರೀತಿಯಲ್ಲಿ ಎಲ್.ಕೆ.ಜಿ ಶಾಲೆಗಳ ಪ್ರಾರಂಭಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಪ್ರಾರಂಭದಲ್ಲೇ ಉತ್ತಮ ಶಿಕ್ಷಣ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಇದು ಒಂದು ಹೆಜ್ಜೆ ಎಂದರು.
ಸ್ಮಾರ್ಟ್ ಕ್ಲಾಸ್ ಮತ್ತು ಉಚಿತ ವಿದ್ಯುತ್
46,000 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ. ಸ್ಮಾರ್ಟ್ ಕ್ಲಾಸ್‌ಗಳು ಹಾಗೂ ಟಿವಿಗಳ ಮೂಲಕ ಮಕ್ಕಳಿಗೆ ನವೀನ ಕಲಿಕೆಯ ಅನುಭವ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ತಂದೆಯವರ ಶಾಲೆಗೆ 10 ಲಕ್ಷ ರೂ. ದೇಣಿಗೆ
“ನನ್ನ ತಂದೆ ಓದಿದ ಶಾಲೆಗೆ ನನ್ನ ಸಂಬಳದಿಂದ 10 ಲಕ್ಷ ರೂ. ನೀಡಿದ್ದೇನೆ. ಸಿಎಂ ಸಿದ್ದರಾಮಯ್ಯನವರ ಶಾಲೆಗಳಿಗೆ ಸಹ ಇದೇ ರೀತಿ ನೆರವು ನೀಡಲಾಗಿದೆ,” ಎಂದು ಅವರು ಹಂಚಿಕೊಂಡರು.
500 ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ
ಜನರ ಅನುಕೂಲಕ್ಕಾಗಿ ಈ ವರ್ಷ ರಾಜ್ಯಾದ್ಯಂತ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಂದು ಹೆಜ್ಜೆ ಎಂದು ಸಚಿವರು ವಿವರಿಸಿದರು.
ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ
ಈ ವರ್ಷ ನಕಲು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಸಿಟಿವಿ ಕ್ಯಾಮೆರಾ ಸ್ಥಾಪನೆಯಂತಹ ಕ್ರಮಗಳು ಉನ್ನತ ಗುಣಮಟ್ಟದ ಪರೀಕ್ಷಾ ವ್ಯವಸ್ಥೆ ನಿರ್ಮಾಣಕ್ಕೆ ಸಹಕಾರಿ ಎಂದರು. “ಉತ್ತೀರ್ಣ ಪ್ರಮಾಣ ಕಡಿಮೆಯಾಗಿದ್ರೂ, ಗುಣಮಟ್ಟ ಉತ್ತಮವಾಗಬೇಕು ಎಂಬದೇ ನಮ್ಮ ಧ್ಯೇಯ,” ಎಂದರು.
ಪೋಷಕರಿಗೆ ಸಂದೇಶ
ಪೋಷಕರು ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸಬೇಕು ಹಾಗೂ ಹಾಜರಾತಿ ಖಚಿತಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಸಚಿವರು, “ಒಂದು ದಿನ ಶಾಲೆಗೆ ಗೈರಾಗಿದ್ರೆ, ಆ ದಿನವನ್ನು ಮಗು ಮರಳಿ ಪಡೆಯಲಾರದು,” ಎಂದು ಎಚ್ಚರಿಕೆ ನೀಡಿದರು.
ಶಿಕ್ಷಕರಿಗೆಲ್ಲಾ ಸರ್ಕಾರಿ ಶಾಲೆಗಳ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಇದೆ ಎಂದರು ಮಧು ಬಂಗಾರಪ್ಪ.