ಹಾವೇರಿ: ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಸರಕಾರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕಟ್ಟಡವನ್ನು ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಬಳಸುವಂತೆ ಮಾಡಲಾಗುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿರುವ ಅವರು, ರೂ. 44 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸವಣೂರ ಜನತೆಗೆ ಬಹಳ ಮಹತ್ವದ್ದಾಗಿದೆ. ಆದರೆ, ಈ ಕಟ್ಟಡದಲ್ಲಿ ಆಯುರ್ವೇದ ಕಾಲೇಜನ್ನು ಆರಂಭಿಸುವ ಬದಲು, ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಳಾಂತರಿಸುವ ಸರ್ಕಾರದ ಯೋಜನೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದ್ದಾರೆ.

ಸವಣೂರ ಪಟ್ಟಣದ ಹೊರವಲಯದಲ್ಲಿರುವ ಈ ಕಟ್ಟಡ ಸಾರ್ವಜನಿಕರಿಗೆ ಸುಲಭವಾಗಿ ಪ್ರವೇಶ ದೊರಕುವ ಸ್ಥಳದಲ್ಲಿಲ್ಲ. ಹಾಗಾಗಿ, ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯನ್ನು ಇದೇ ಕಟ್ಟಡದಲ್ಲಿ ಪ್ರಾರಂಭಿಸುವಂತೆ ಹಾಗೂ ಕಟ್ಟಡದ ಪೂರ್ಣ ನಿರ್ಮಾಣಕ್ಕಾಗಿ ಅಗತ್ಯ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ತಾಲೂಕಾ ಸಾರ್ವಜನಿಕ ಆಸ್ಪತ್ರೆ ಈಗಿರುವ ಸ್ಥಳದಲ್ಲಿಯೇ ಮುಂದುವರಿಯಬೇಕು ಹಾಗೂ ಅದನ್ನು ಸುಧಾರಿಸಿ ಹೆಚ್ಚಿನ ಸೌಲಭ್ಯಗಳೊಂದಿಗೆ ಅಪ್‌ಗ್ರೇಡ್ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.