ಜಮಖಂಡಿ: ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸಹಕಾರಿ ತತ್ವದಲ್ಲಿ ಬೆಳೆದ ಹೆಮ್ಮರವಾಗಿದ್ದು, ಜನರ ಜೀವನಾಡಿಯಾಗಿ ಪರಿಣಮಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ಬುಧವಾರ ಜಮಖಂಡಿಯಲ್ಲಿ ದಿ ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕ್‌ನ ನೂತನ ಪ್ರಧಾನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಸಹಕಾರಿ ತತ್ವದ ಮೂಲಮಂತ್ರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು. ನಾವು ಎಂಬ ದೃಷ್ಟಿಕೋಣದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಸಹಕಾರ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಸಾಧ್ಯ. ಈ ಕಾರಣಕ್ಕೆ ಜಮಖಂಡಿ ಬ್ಯಾಂಕ್ ಜನರ ಭರವಸದ ಕೇಂದ್ರವಾಗಿಯಾಗಿದೆ” ಎಂದರು.
ಮಹಾತ್ಮ ಗಾಂಧಿಯ ಸಹಕಾರ ತತ್ವ
“ಮಹಾತ್ಮ ಗಾಂಧಿ ಸಹ ಸಹಕಾರಿ ತತ್ವದ ಮೇಲೆ ನಂಬಿಕೆ ಹೊಂದಿದ್ದರು. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶಾಲೆ, ಪಂಚಾಯಿತಿ, ಸಹಕಾರಿ ಸಂಸ್ಥೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದರು. ಸಹಕಾರದಲ್ಲಿ ನಾವು ಒಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ಖಚಿತ” ಎಂದರು.
ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಶೀಘ್ರ ಕ್ರಮ
“ಆಲಮಟ್ಟಿ ಜಲಾಶಯದ ಎತ್ತರವನ್ನು ಶೀಘ್ರವೇ ಹೆಚ್ಚಿಸಲು ಸರ್ಕಾರ ಬದ್ದವಾಗಿದೆ. ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ನ್ಯಾಯಾಲಯದ ಆದೇಶವಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಐದು ವರ್ಷದಲ್ಲಿ ₹2 ಲಕ್ಷ ಕೋಟಿ ನೀರಾವರಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ. ಈ ವರ್ಷ ₹22 ಸಾವಿರ ಕೋಟಿ ನಿಗದಿಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ” ಎಂದರು.
ನೂರಾರು ನಾಯಕರು ಬೆಳೆದ ಕ್ಷೇತ್ರ
“ಜಮಖಂಡಿ ಬ್ಯಾಂಕ್ ಮೂಲಕ ಅನೇಕ ನಾಯಕರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ರಾಹುಲ್ ಕಲೂತಿ ಅಧ್ಯಕ್ಷರಾಗಿದ್ದಾಗ 10 ಶಾಖೆಗಳಿದ್ದ ಈ ಬ್ಯಾಂಕ್ ಈಗ 16 ಶಾಖೆಗೆ ವಿಸ್ತರಿಸಿದೆ. ಸಹಕಾರಿ ಕ್ಷೇತ್ರ ಕನ್ನಡಿಗರ ಬದುಕಿಗೆ ಮಹತ್ತರ ಕೊಡುಗೆ ನೀಡಿದೆ” ಎಂದರು.
ಗ್ಯಾರಂಟಿ ಯೋಜನೆಗಳಿಂದ ಬದಲಾವಣೆಯಾದ ಜನಜೀವನ
“ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಆತ್ಮನಿರ್ಧರರಾಗಿದ್ದಾರೆ. ಉಚಿತ ಬಸ್ ಸೇವೆಯಿಂದ ವಿಜಯಪುರದ ಮಹಿಳೆಯರು ಬೆಂಗಳೂರಿಗೆ ಬಂದು ವ್ಯಾಪಾರ ಮಾಡುತ್ತಿದ್ದಾರೆ. ಯುವನಿಧಿ ಯೋಜನೆಯೂ ಯುವಕರಿಗೆ ಅನುಕೂಲವಾಗಿದೆ. ₹4 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ” ಎಂದರು.
ಸಹಕಾರದಿಂದ ಬೆಳೆದ ನಾಯಕರು
“ನಾನು ಸಹಕಾರ ಕ್ಷೇತ್ರದಿಂದ ಬೆಳೆಯುತ್ತಿದ್ದೇನೆ. 1983ರಲ್ಲಿ ಟಿಎಪಿಸಿಎಂಎಸ್ ನಿರ್ದೇಶಕನಾಗಿ ಕೆಲಸ ಆರಂಭಿಸಿದ್ದೆ. ಸಹಕಾರ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ಇದರಿಂದ ರೈತರ ಹಿತಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ” ಎಂದರು.
ಮಾಧ್ಯಮ ಪ್ರತಿಕ್ರಿಯೆ
ಖಾಲಿ ಇರುವ ಪರಿಷತ್ ಸ್ಥಾನಗಳ ಬಗ್ಗೆ ಚರ್ಚೆ
“ದೆಹಲಿಗೆ ಹೋಗುವುದು ಖಾಲಿ ಇರುವ ವಿಧಾನ ಪರಿಷತ್ ಸ್ಥಾನಗಳ ಕುರಿತು ಹೈಕಮಾಂಡ್ ಜೊತೆ ಚರ್ಚಿಸಲು. ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು” ಎಂದರು.
ಸಂಪುಟ ಪುನಾರಚನೆಗೆ ಸಂಬಂಧಿಸಿದ ಊಹಾಪೋಹಗಳು
“ಸಂಪುಟ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ನಿಜವಲ್ಲ. ಇದು ಸಂಪೂರ್ಣ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ” ಎಂದರು.
ಬಿಜೆಪಿಗೆ ತಿರುಗೇಟು
“ಬಿಜೆಪಿ ರೈತರ ಬಗ್ಗೆ ಕಾಳಜಿ ಹೊಂದಿದರೆ ಪೆಟ್ರೋಲ್, ಡೀಸೆಲ್ ದರ ಇಳಿಸಲಿ. ನಮ್ಮ ಸರ್ಕಾರ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಬದ್ದವಾಗಿದೆ” ಎಂದು ಡಿಸಿಎಂ ಶಿವಕುಮಾರ್ ಹೇಳಿದ್ದಾರೆ.