ಹಾವೇರಿ: ಬಂಡವಾಳ ಶಾಹಿ ಮತ್ತು ಕಮ್ಯುನಿಸ್ಟ್ ವ್ಯವಸ್ಥೆಗಳಿಗೆ ಸಹಕಾರ ತತ್ವವೇ ಸೂಕ್ತ ಉತ್ತರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಹಕಾರ ವ್ಯವಸ್ಥೆಯಡಿ ಆರ್ಥಿಕ ಬೆಳವಣಿಗೆಯ ನಿಯಂತ್ರಣ ಬಂದಾಗ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರ್ಥಿಕ ಸಮೃದ್ಧಿ ಸಾಧ್ಯವಾಗುತ್ತದೆ. ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆರ್ಥಿಕ ನೀತಿಗಳನ್ನು ಜನರೇ ತೀರ್ಮಾನಿಸಬೇಕು. ಇದರಲ್ಲಿ ಸಹಕಾರ ರಂಗವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.
ಹಾವೇರಿಯ ರಜನಿ ಸಭಾಂಗಣದಲ್ಲಿ ಶ್ರೀ ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, “ನಾಗರಿಕತೆ ಬೆಳೆದಂತೆ ಮನುಷ್ಯನ ಅವಶ್ಯಕತೆಗಳು ಹೆಚ್ಚಾಗಿವೆ. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕೆಂಬುದು ಪ್ರತಿಯೊಬ್ಬರ ಕನಸು. ಈ ಕನಸು ನನಸಾಗಲು ವ್ಯಕ್ತಿಗಳು, ಸಂಘ-ಸಂಸ್ಥೆಗಳು ಮತ್ತು ಸರ್ಕಾರಗಳ ಸಹಕಾರ ಅಗತ್ಯ. ಜನ್ಮದಿಂದಲೇ ಹೋರಾಟ ಸಾಧ್ಯವಿಲ್ಲ; ತಾಯಿ, ತಂದೆ, ಗೆಳೆಯರ ಸಹಕಾರ ಬೇಕು. ಶಿಕ್ಷಣ ಪಡೆದು ಸ್ವತಂತ್ರವಾಗಿ ನಿಲ್ಲಲು ಆರ್ಥಿಕ ಸಹಾಯ ಅವಶ್ಯಕ. ಈ ಸಹಾಯ ದುಡಿಮೆಯಿಂದ ಬರುತ್ತದೆ. ಹಿಂದೆ ದುಡ್ಡೇ ದೊಡ್ಡಪ್ಪನಾಗಿತ್ತು; ಈಗ ದುಡಿಮೆಯೇ ದೊಡ್ಡಪ್ಪ. ಇದನ್ನೇ ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದರು. ಕಾಯಕಕ್ಕೆ ಮಹತ್ವ ಕೊಡುವ ಸಮಾಜ ಎಂದಿಗೂ ಬಡತನ ಎದುರಿಸುವುದಿಲ್ಲ,” ಎಂದರು.
ಸಹಕಾರ ವ್ಯವಸ್ಥೆಯ ಶಕ್ತಿ:
ಸುವರ್ಣ ಸಹಕಾರ ಸಂಘವು ಅನೇಕರ ಏಳಿಗೆಗಾಗಿ, ಅವರ ದುಡಿಮೆಗೆ ಸಹಾಯ ಮಾಡುವ ಉತ್ತಮ ವ್ಯವಸ್ಥೆಯಾಗಿದೆ ಎಂದ ಬೊಮ್ಮಾಯಿ, “ಸಹಕಾರ ವ್ಯವಸ್ಥೆಗೆ ಇರುವ ಶಕ್ತಿ ಬೇರೆ ಯಾವ ವ್ಯವಸ್ಥೆಗೂ ಇಲ್ಲ. ಬಂಡವಾಳ ಶಾಹಿಯಲ್ಲಿ ಕೇವಲ ಉತ್ಪಾದನೆ, ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಕೇವಲ ವಿತರಣೆ ಇರುತ್ತದೆ. ಆದರೆ ಸಹಕಾರ ವ್ಯವಸ್ಥೆ ಆರ್ಥಿಕ ಬೆಳವಣಿಗೆಯನ್ನು ನಿಯಂತ್ರಿಸಿ, ಪ್ರಜಾಪ್ರಭುತ್ವದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತದೆ,” ಎಂದರು.
ಅವರು ಮುಂದುವರಿದು, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳದ ಕೊರತೆಯಿಂದ ಮಾರುಕಟ್ಟೆಯಿಂದ ಹಣ ಪಡೆದು ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತವೆ. ಆದರೆ ಮಾರುಕಟ್ಟೆಯ ಆದ್ಯತೆಗಳು ಸರ್ಕಾರವನ್ನು ನಿಯಂತ್ರಿಸುತ್ತವೆ. ಜನರಿಂದ ಆಯ್ಕೆಯಾದ ಸರ್ಕಾರ ಜನರ ಏಳಿಗೆಗೆ ಕೆಲಸ ಮಾಡಬೇಕಾದರೆ ಆರ್ಥಿಕ ಶಕ್ತಿ ಜನರ ಕೈಯಲ್ಲಿ ಇರಬೇಕು. ಪ್ರಧಾನಿ ಮೋದಿಯವರ ಆರ್ಥಿಕ ಕಾರ್ಯಕ್ರಮಗಳಿಂದ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮೇಲೆ ಬಂದಿದ್ದಾರೆ. ಆರ್ಥಿಕ ಸ್ವಾತಂತ್ರ್ಯ ಸ್ಥಾಪನೆಗೆ ದೊಡ್ಡ ಮಟ್ಟದ ಆರ್ಥಿಕ ಕ್ರಾಂತಿ ಆಗಬೇಕು,” ಎಂದು ಒತ್ತಿ ಹೇಳಿದರು.
ಉದ್ಯೋಗವೇ ಮಾರ್ಗ:
ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್‌ಗಳ ಯಶಸ್ಸನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಬೊಮ್ಮಾಯಿ, “ಬಾಂಗ್ಲಾದೇಶದ ಮೊಹಮದ್ ಯೂನಿಸ್ ಅವರೊಂದಿಗೆ ಮಾತನಾಡಿದಾಗ, ಉಚಿತ ಕೊಡುಗೆಗಳ ಬದಲು ಜನರಿಗೆ ಉದ್ಯೋಗ ನೀಡಿ, ಸ್ವಾವಲಂಬನೆಯ ವ್ಯವಸ್ಥೆ ಸೃಷ್ಟಿಸಬೇಕು ಎಂದಿದ್ದರು. ಅವರು ಶೂನ್ಯ ಬಡ್ಡಿಯಲ್ಲಿ ಭಿಕ್ಷುಕರಿಗೆ ಸಾಲ ನೀಡಿ, ದಿನಬಳಕೆಯ ವಸ್ತುಗಳ ಮಾರಾಟಕ್ಕೆ ಪ್ರೋತ್ಸಾಹಿಸಿದ್ದಾರೆ. ಇದರಿಂದ 96,000 ಜನರಲ್ಲಿ 11,000ಕ್ಕೂ ಹೆಚ್ಚು ಜನ ಭಿಕ್ಷೆ ಬಿಟ್ಟು ಮಾರ್ಕೆಟಿಂಗ್ ಮಾಡುತ್ತಿದ್ದಾರೆ,” ಎಂದು ತಿಳಿಸಿದರು.
ಸೌಹಾರ್ದದಿಂದ ಸ್ವಾಭಿಮಾನದ ಬದುಕು:
ಪ್ರತಿ ಊರಿನಲ್ಲಿ ಸೌಹಾರ್ದ ಬ್ಯಾಂಕ್‌ಗಳು ಸ್ಥಾಪನೆಯಾದರೆ ಜನರ ಬದುಕು ಸ್ವಾಭಿಮಾನದಿಂದ ಕೂಡಿರುತ್ತದೆ ಎಂದ ಬೊಮ್ಮಾಯಿ, “ಸೌಹಾರ್ದ ಕಾಯ್ದೆಯನ್ನು ಜಾರಿಗೆ ತಂದ ಜೆ.ಎಚ್. ಪಟೇಲ್ ಮತ್ತು ಎಸ್.ಎಸ್. ಪಾಟೀಲ್ ಅವರಿಗೆ ವಿರೋಧವಿದ್ದರೂ, ಈ ವ್ಯವಸ್ಥೆ ಯಶಸ್ವಿಯಾಗಿದೆ. ಕೆಲವು ಸೌಹಾರ್ದ ಬ್ಯಾಂಕ್‌ಗಳ ಮೋಸದಿಂದ ಕೆಟ್ಟ ಹೆಸರು ಬಂದರೂ, ಸುವರ್ಣ ಪತ್ತಿನ ಬ್ಯಾಂಕ್ 900 ಕೋಟಿಗೂ ಹೆಚ್ಚಿನ ವಹಿವಾಟಿನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಹೆಮ್ಮೆಯ ಸಂಗತಿ,” ಎಂದರು.
ಸಮಾರಂಭದಲ್ಲಿ ಶ್ರೀ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು (ಹುಕ್ಕೇರಿ ಮಠ), ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.