ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ತಾನು ಎಲ್ಲಿಯೂ ಹೇಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿ ವಿವಾದ ಸೃಷ್ಟಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಇಂತಹ ಸುದ್ದಿಗಳನ್ನು ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಲಾಲ್‌ಬಾಗ್ ಉದ್ಯಾನದಲ್ಲಿ ನಡೆದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, “ಕೆಲವರು ನನ್ನನ್ನು ಭೇಟಿಯಾದಾಗ, ನೀವು ಮುಖ್ಯಮಂತ್ರಿಯಾಗಬೇಕು, ಆ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ, ನಾನೇ ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿದ್ದೇನೆ ಎಂದು ಕೆಲವು ಮಾಧ್ಯಮಗಳು ಸುದ್ದಿಯನ್ನು ತಿರುಚಿ ಪ್ರಸಾರ ಮಾಡಿವೆ. ಇಂತಹ ತಪ್ಪು ವರದಿಗಳನ್ನು ತೋರಿಸಬೇಡಿ” ಎಂದು ಕಿಡಿಕಾರಿದರು.
“ನಾನು ಸಿಎಂ ಹುದ್ದೆಗೆ ಆತುರಪಡುತ್ತಿಲ್ಲ. ಜನರ ಸೇವೆಗಾಗಿಯೇ ಇಲ್ಲಿಗೆ ಬಂದಿದ್ದೇನೆ, ರಾಜಕಾರಣಕ್ಕಲ್ಲ. ರಾಜ್ಯದ ಜನರಿಗೆ ಮತ್ತು ಬೆಂಗಳೂರಿನ ನಾಗರಿಕರಿಗೆ ಉತ್ತಮ ಆಡಳಿತ ನೀಡಲು ದಿನರಾತ್ರಿ ಶ್ರಮಿಸುತ್ತಿದ್ದೇನೆ. ಆದರೆ, ಕೆಲವು ಮಾಧ್ಯಮಗಳು ಒಳ್ಳೆಯ ಕೆಲಸವನ್ನು ಬಿಟ್ಟು ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿವೆ” ಎಂದು ಶಿವಕುಮಾರ್ ಆರೋಪಿಸಿದರು.
“ನನ್ನ ಗುರಿ ನನಗೆ ಗೊತ್ತಿದೆ. ಭಗವಂತ ಯಾವಾಗ ಅವಕಾಶ ಕೊಡುತ್ತಾನೋ ಆಗ ಕೊಡಲಿ. ಆದರೆ, ಈ ರೀತಿ ಸುದ್ದಿಗಳನ್ನು ತಿರುಚಿ, ದಾರಿತಪ್ಪಿಸುವ ಪ್ರಯತ್ನ ಮಾಡಿದರೆ, ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ. ಮಾಧ್ಯಮಗಳು ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು” ಎಂದು ಎಚ್ಚರಿಕೆ ನೀಡಿದರು.
ಇದೇ ರೀತಿಯ ಸುಳ್ಳು ಸುದ್ದಿಗಳನ್ನು ಮುಂದುವರೆಸಿದರೆ, ಮಾಧ್ಯಮಗಳಿಗೆ ಸಹಕಾರ ನೀಡುವುದಿಲ್ಲ, ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ ಮತ್ತು ಪತ್ರಿಕಾಗೋಷ್ಠಿಗಳನ್ನೂ ನಡೆಸುವುದಿಲ್ಲ ಎಂದು ಡಿಸಿಎಂ ಸ್ಪಷ್ಟವಾಗಿ ತಿಳಿಸಿದರು.