ಮಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗ ಶಿವರಾಮೇ ಗೌಡ ನೀಡಿದ ಹೇಳಿಕೆಯನ್ನು ಆರೋಗ್ಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಖಂಡಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಶಿವರಾಮೇ ಗೌಡ ಅವರು ಇತ್ತೀಚೆಗಷ್ಟೇ ಪಕ್ಷಕ್ಕೆ ಮರಳಿ ಬಂದಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಪಕ್ಷದ ಒಳಗಿನ ನಿರ್ಧಾರಗಳನ್ನು ವರಿಷ್ಠ ನಾಯಕರೇ ತೀರ್ಮಾನಿಸುತ್ತಾರೆ,” ಎಂದು ಸ್ಪಷ್ಟಪಡಿಸಿದರು.
ಅವರು ಮುಂದುವರೆದು, “ಶಿವರಾಮೇ ಗೌಡ ಅವರಿಗೆ ಮೊದಲಿನಿಂದಲೇ ಈ ರೀತಿಯ ಹೇಳಿಕೆ ನೀಡುವ ಅಭ್ಯಾಸವಿದೆ. ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಈಗ ಪಕ್ಷಕ್ಕೆ ಮರಳಿರುವುದರಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಒಳ್ಳೆಯದು. ಕೆಲವರಿಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಸುದ್ದಿಯಲ್ಲಿ ಇರಬೇಕೆಂಬ ಹಂಬಲ ಇರುತ್ತದೆ. ಆದರೆ ಅನಗತ್ಯ ಗೊಂದಲ ಸೃಷ್ಟಿ ಮಾಡುವುದು ತಪ್ಪು,” ಎಂದು ಸಲಹೆ ನೀಡಿದರು.
ಇತ್ತೀಚಿನ ರಾಜ್ಯ ಕಾಂಗ್ರೆಸ್ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿದ ಗುಂಡೂರಾವ್, “ಪಕ್ಷದ ಭವಿಷ್ಯ ಹಾಗೂ ನಾಯಕತ್ವದ ನಿರ್ಧಾರವನ್ನು ಕೇವಲ ವರಿಷ್ಠರು ತೆಗೆದುಕೊಳ್ಳುತ್ತಾರೆ. ಅದಕ್ಕೆ ಎಲ್ಲರೂ ಒಳ್ಪಟ್ಟಿರಬೇಕು,” ಎಂದು ಒತ್ತಿ ಹೇಳಿದರು.