ಪಾಲಿಕೆಯೇ ದಿವಾಳಿಯಾಗಿರುವಾಗ ಹೊಸ ಇಂಜಿನಿಯರ್‌ಗಳ ನೇಮಕ ಹೇಗೆ?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಾಂತರದ ರಾಯಭಾರಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಗಂಭೀರ ಆರೋಪ ಮಾಡಿದ್ದಾರೆ. ಸಂವಿಧಾನದಲ್ಲಿ ಇಲ್ಲದ ಜಾತಿಗಳನ್ನು ಸೃಷ್ಟಿಸಿ, ಜಾತಿ ಸಮೀಕ್ಷೆಯ ಮೂಲಕ ಹಿಂದೂಗಳನ್ನು ತುಳಿಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ದೂರಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ, “ಸಿಎಂ ಸಿದ್ದರಾಮಯ್ಯ ಸಂವಿಧಾನದಲ್ಲಿ ಇಲ್ಲದ ಜಾತಿಗಳನ್ನು ಹುಟ್ಟುಹಾಕಿದ್ದಾರೆ. ಈ ಜಾತಿ ಸಮೀಕ್ಷೆ ರದ್ದಾಗಲಿದೆ. ಇದರ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡಲಾಗುತ್ತಿದೆ. ಯಾವುದೇ ಕ್ರಮ ಕೈಗೊಂಡರೂ ಸಂವಿಧಾನದ ಪ್ರಕಾರವೇ ಆಗಬೇಕು. ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವಿದೆ, ಅದರಂತೆ ಕ್ರಮ ಕೈಗೊಳ್ಳಬೇಕು,” ಎಂದರು.
ಸಿದ್ದರಾಮಯ್ಯ ಅವರು ಎಲ್ಲದರಲ್ಲೂ ಮುಸ್ಲಿಂ ಓಲೈಕೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ ಅಶೋಕ, “ಅವರಿಗೆ ಹಿಂದೂಗಳ ಮತ ಬೇಕು, ಆದರೆ ಮತ ಪಡೆದ ನಂತರ ಹಿಂದೂ ಧರ್ಮದಲ್ಲಿ ಲೋಪವಿದೆ ಎಂದು ಹೇಳುತ್ತಾರೆ. ಮುಸ್ಲಿಮರಲ್ಲಿ ಮಹಿಳೆಯರು ಮಸೀದಿಗೆ ಹೋಗದಿರುವುದು ತಪ್ಪೆಂದು ಅವರಿಗೆ ಅನಿಸಿಲ್ಲ. ಹಿಂದೂ ಧರ್ಮವನ್ನು ಗುರಿಯಾಗಿಸುವ ಬದಲು ಇತರ ಧರ್ಮಗಳ ಬಗ್ಗೆಯೂ ಮಾತನಾಡಬೇಕು,” ಎಂದು ಟೀಕಿಸಿದರು.
ದಸರಾ ಹಬ್ಬವನ್ನು ನಾಡಹಬ್ಬ ಎಂದು ಕರೆಯುವ ಸಿಎಂ, ಮುಸ್ಲಿಂ ಹಬ್ಬಗಳನ್ನೂ ನಾಡಹಬ್ಬ ಎಂದು ಘೋಷಿಸಲಿ ಮತ್ತು ಆ ಹಬ್ಬಗಳನ್ನು ಹಿಂದೂಗಳಿಂದ ಉದ್ಘಾಟಿಸಲಿ ಎಂದು ಆಗ್ರಹಿಸಿದರು. “ದಸರಾ ಉದ್ಘಾಟನೆಯನ್ನು ಹಿಂದೂಗಳಿಂದ ಮಾಡಿಸಬೇಕಿತ್ತು. ಇದು ಮೈಸೂರು ಅರಸರ ಪರಂಪರೆಯಾಗಿದೆ. ಇದಕ್ಕೆ ಪ್ರತ್ಯೇಕ ಕಾನೂನು ತರಬೇಕು. ಮಸೀದಿಗಳ ಮುಂದೆ ಗಣೇಶ ಮೆರವಣಿಗೆಗೆ ತಡೆಯೊಡ್ಡುವಂತೆ ಕಾಂಗ್ರೆಸ್ ಸರ್ಕಾರ ಹಿಂದೂ-ಮುಸ್ಲಿಂ ನಡುವೆ ಒಡಕು ಮೂಡಿಸಿದೆ,” ಎಂದು ಆರೋಪಿಸಿದರು.
ಬಿಬಿಎಂಪಿಯ ದುಸ್ಥಿತಿ: ಬೆಂಗಳೂರಿನಲ್ಲಿ 5,000 ಕೋಟಿ ರೂ. ಬಿಡುಗಡೆಯಾಗಿದ್ದರೂ ರಸ್ತೆ ದುರಸ್ತಿಯಾಗಿಲ್ಲ ಎಂದು ಆರ್. ಅಶೋಕ ಟೀಕಿಸಿದರು. “ಕುಡಿಯುವ ನೀರಿನ ಘಟಕದ 20 ಲೀಟರ್ ನೀರಿನ ದರವನ್ನು 5 ರಿಂದ 10 ರೂ.ಗೆ ಏರಿಕೆ ಮಾಡಲಾಗಿದೆ. ತೈಲ, ಹಾಲಿನ ದರ ಏರಿಕೆಯಾಗಿದೆ, ಹೊಸದಾಗಿ ಕಸ ಶುಲ್ಕ ಹೇರಲಾಗಿದೆ. ಗಾಳಿಗೂ ಶುಲ್ಕ ವಿಧಿಸಿದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ‘ಬ್ರ್ಯಾಂಡ್ ಬೆಂಗಳೂರು’ ಸಾಕಾರವಾಗಲಿದೆ. 65-70,000 ಕೋಟಿ ರೂ.ನಷ್ಟು ಹೆಚ್ಚುವರಿ ತೆರಿಗೆ ಹೇರಲಾಗಿದೆ,” ಎಂದರು.
ಇಂಜಿನಿಯರ್‌ಗಳ ನೇಮಕಾತಿ ಸಾಧ್ಯವೇ?: ಕಾಂಗ್ರೆಸ್ ಸರ್ಕಾರ ಬಂದ ನಂತರ ಬಿಬಿಎಂಪಿಯನ್ನು ಐದು ಭಾಗವಾಗಿ ವಿಂಗಡಿಸಲಾಗಿದೆ. 198 ವಾರ್ಡ್‌ಗಳಿಗೆ 90% ಇಂಜಿನಿಯರ್‌ಗಳ ಕೊರತೆ ಇದೆ. “ಪಾಲಿಕೆ ದಿವಾಳಿಯಾಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ? ಸಾವಿರಕ್ಕೂ ಅಧಿಕ ನೇಮಕಾತಿಗೆ ಹಣ ಎಲ್ಲಿಂದ ತರುತ್ತಾರೆ? ಅನೇಕ ಕಾಮಗಾರಿಗಳು ಸ್ಥಗಿತಗೊಂಡಿವೆ. ಇಂತಹ ಸ್ಥಿತಿಯಲ್ಲಿ ಆಡಳಿತ ಸಾಧ್ಯವಿಲ್ಲ,” ಎಂದು ಪ್ರಶ್ನಿಸಿದರು.
ಪರಿಹಾರದಲ್ಲಿ ತಾರತಮ್ಯ: ವಯನಾಡಿನಲ್ಲಿ ಆನೆ ದಾಳಿಯಿಂದ ಸತ್ತವರಿಗೆ 15 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆದರೆ, ಹಾಸನದ ಘಟನೆಯ ಸಂತ್ರಸ್ತರಿಗೆ ಮಾನವೀಯತೆ ಆಧಾರದಲ್ಲಿ ಹೆಚ್ಚಿನ ಪರಿಹಾರ ನೀಡಬೇಕಿತ್ತು. “ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯದ ಜನರ ಮೇಲೆ ಮಾನವೀಯತೆ ಇಲ್ಲ,” ಎಂದು ಆರೋಪಿಸಿದರು.
ಜಮೀನು ಸ್ವಾಧೀನ ವಿವಾದ: ಆನೇಕಲ್‌ನಲ್ಲಿ ಸಾವಿರಾರು ಎಕರೆ ಫಲವತ್ತಾದ ಜಮೀನು ಸ್ವಾಧೀನಕ್ಕೆ ಒಳಪಟ್ಟಿದೆ. ಬಿಡದಿಯಲ್ಲಿ ಹಿಂದಿನ ಸರ್ಕಾರ ರದ್ದುಗೊಳಿಸಿದ್ದ ಸ್ವಾಧೀನ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಲಾಗಿದೆ. ಕೆಂಗೇರಿ, ಯಲಹಂಕ ಸೇರಿದಂತೆ 50,000 ಎಕರೆ ರೈತರ ಜಮೀನನ್ನು ಸ್ವಾಧೀನಕ್ಕೆ ಒಳಪಡಿಸಲು ಪ್ರಯತ್ನ ನಡೆಯುತ್ತಿದೆ ಎಂದು ಆರ್. ಅಶೋಕ ಆರೋಪಿಸಿದರು.
ಧರ್ಮಸ್ಥಳ ತನಿಖೆ ವಿವಾದ: ಧರ್ಮಸ್ಥಳ ವಿಚಾರದಲ್ಲಿ ಎಸ್‌ಐಟಿ ತನಿಖೆ ನಿಧಾನವಾಗಿದೆ ಎಂದು ಟೀಕಿಸಿದ ಅವರು, “ತನಿಖೆಗೆ ಒಳಪಟ್ಟವರು ಹೊರಗೆ ಬಂದು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಮತ್ತು ಕೋರ್ಟ್‌ಗೆ ಹೋಗುತ್ತೇವೆ. ಕಮ್ಯುನಿಸ್ಟ್‌ಗಳು ಧರ್ಮಸ್ಥಳವನ್ನು ಹಾಳುಮಾಡಲು ಪ್ರಯತ್ನಿಸಿದ್ದಾರೆ,” ಎಂದರು.
ವಕ್ಫ್ ತಿದ್ದುಪಡಿ ಸ್ವಾಗತ: ವಕ್ಫ್ ತಿದ್ದುಪಡಿ ಮಸೂದೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದನ್ನು ಸ್ವಾಗತಿಸಿದ ಆರ್. ಅಶೋಕ, “ಇದರಿಂದ ಲಕ್ಷಾಂತರ ರೈತರ ಜಮೀನು ಮತ್ತು ದೇವಾಲಯಗಳ ಆಸ್ತಿ ಉಳಿಯಲಿದೆ,” ಎಂದರು.