ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ. ಜಾತಿ ಸಮೀಕ್ಷೆಯ ಹೆಸರಿನಲ್ಲಿ ಸಂಘರ್ಷ ಉಂಟುಮಾಡಿ, ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಬಿಜೆಪಿ ನಾಯಕರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಯನ್ನು ತೀವ್ರವಾಗಿ ಟೀಕಿಸಿದರು. “ದೇಶದಲ್ಲಿ ಗಣತಿ ಕಾಯಿದೆ ಇದೆ. ಅದರ ಪ್ರಕಾರ ಕೇಂದ್ರ ಸರ್ಕಾರವೇ ಗಣತಿ ನಡೆಸುತ್ತದೆ. ರಾಜ್ಯ ಸರ್ಕಾರ ಸರ್ವೆ ಮಾಡಬಹುದಾದರೂ, ಮನೆ-ಮನೆಗೆ ಹೋಗಿ ಗಣತಿ ಮಾಡುವುದು ಕಾಯಿದೆಯ ವಿರುದ್ಧವಾಗಿದೆ,” ಎಂದು ಅವರು ಹೇಳಿದರು.
ಕಾಂತರಾಜ ವರದಿಯ ಜಾರಿಗೆ ಏಕೆ ವಿಳಂಬ?
ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಕಾಂತರಾಜ ವರದಿಯನ್ನು ಏಕೆ ತಯಾರಿಸಿದ್ದರು ಮತ್ತು ಅದನ್ನು ಏಕೆ ಜಾರಿಗೊಳಿಸಿಲ್ಲ ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು. “ಕಾಂತರಾಜ ವರದಿಯನ್ನು ಜಾರಿಗೊಳಿಸದಿರಲು ಕಾರಣವೇನು? ಈ ಬಗ್ಗೆ ಸರ್ಕಾರ ಉತ್ತರ ನೀಡಬೇಕು,” ಎಂದು ಅವರು ಪ್ರಶ್ನಿಸಿದರು.
ಸಂವಿಧಾನ ವಿರೋಧಿ ಕೆಲಸ
ಜಾತಿ ಸಮೀಕ್ಷೆಯಲ್ಲಿ ಸಂವಿಧಾನದಲ್ಲಿ ಉಲ್ಲೇಖವಿಲ್ಲದ ಕೆಲವು ಧರ್ಮಗಳನ್ನು ಸೇರಿಸಿರುವುದನ್ನು ಬೊಮ್ಮಾಯಿ ಖಂಡಿಸಿದರು. “ಸಂವಿಧಾನದಲ್ಲಿ ಕೇವಲ ಆರು ಧರ್ಮಗಳನ್ನು ಗುರುತಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ‘ಇತರರು’, ‘ನಾಸ್ತಿಕರು’ ಎಂಬ ಕಾಲಂಗಳನ್ನು ಸೇರಿಸಿದೆ. ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಲಿಂಗಾಯತ ಎಂಬ ಕಾಲಂಗಳನ್ನು ಯಾಕೆ ರಚಿಸಲಾಗಿದೆ? ಮತಾಂತರಗೊಂಡವರಿಗೆ ಪ್ರತ್ಯೇಕ ಕಾಲಂ ರಚಿಸುವುದಕ್ಕೆ ಯಾವ ಸಂವಿಧಾನದಲ್ಲಿ ಅವಕಾಶವಿದೆ?” ಎಂದು ಅವರು ಕೇಳಿದರು. ಈ ಕ್ರಮವನ್ನು ಸಂವಿಧಾನ ವಿರೋಧಿ ಎಂದು ಬಣ್ಣಿಸಿದ ಅವರು, ಸಮೀಕ್ಷೆಯಲ್ಲಿ ಹಲವು ಲೋಪಗಳಿವೆ ಎಂದು ಸ್ವಾಮೀಜಿಗಳು ಗುರುತಿಸಿದ್ದಾರೆ ಎಂದು ಹೇಳಿದರು.
ಸಮಾಜ ಒಡೆಯುವ ರಾಜಕೀಯ ತಂತ್ರ
“ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಆದರೆ, ಈ ಸಮುದಾಯದ ಜನರು ಜಾಗೃತರಾಗಿದ್ದಾರೆ. 2018ರಲ್ಲಿ ಜನರು ಒಮ್ಮೆ ಪಾಠ ಕಲಿಸಿದ್ದಾರೆ. ಈಗ ಮತ್ತೆ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಮಾಜವನ್ನು ಒಗ್ಗೂಡಿಸಿ ಆಡಳಿತ ನಡೆಸುವ ಬದಲು, ಒಡೆದು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವುದನ್ನು ಜನರು ತಿರಸ್ಕರಿಸುತ್ತಾರೆ,” ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಕುರುಬ ಕ್ರಿಶ್ಚಿಯನ್ ಪೀಠದ ಆರಂಭ?
ರಾಜ್ಯದ ಎಲ್ಲ ಸಮುದಾಯಗಳು ಒಗ್ಗೂಡಿರಬೇಕು ಎಂದು ಕರೆ ನೀಡಿದ ಬೊಮ್ಮಾಯಿ, “ವೀರಶೈವ-ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳು ಒಂದಾಗಿರಬೇಕು. ಈಗ ಕಾಗಿನೆಲೆ ಪೀಠ ಇದೆ. ಮುಂದಿನ ದಿನಗಳಲ್ಲಿ ಕುರುಬ ಕ್ರಿಶ್ಚಿಯನ್ ಪೀಠ ಆರಂಭವಾಗುತ್ತದೆ. ಸಿಎಂ ಸಿದ್ದರಾಮಯ್ಯ ಯಾರಾದರೂ ಫಾದರ್‌ನನ್ನು ತಂದು ಕೂರಿಸಬಹುದು. ಸಮಾಜವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ?” ಎಂದು ವ್ಯಂಗ್ಯವಾಡಿದರು.
ಕಣ್ಣಿಗೆ ಮಣ್ಣೆರಚುವ ಕೆಲಸ
ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಯನ್ನು “ಕಣ್ಣಿಗೆ ಮಣ್ಣೆರಚುವ ಕೆಲಸ” ಎಂದು ಕರೆದ ಬೊಮ್ಮಾಯಿ, “ಒಂದೂವರೆ ಕೋಟಿ ಮನೆಗಳನ್ನು 15 ದಿನಗಳಲ್ಲಿ ಗಣತಿ ಮಾಡುತ್ತೇವೆ ಎನ್ನುತ್ತಾರೆ. ಒಂದು ಮನೆಯಲ್ಲಿ 60 ಪ್ರಶ್ನೆಗಳನ್ನು ಕೇಳುವುದಕ್ಕೆ ಎಷ್ಟು ಸಮಯ ಬೇಕು? ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ದೊಡ್ಡ ಗಣತಿಯನ್ನು ನಡೆಸುವುದು ಸಾಧ್ಯವೇ? ಇದು ಕೇವಲ ಕಾಂತರಾಜ ವರದಿಯ ಕಟ್ ಆಂಡ್ ಪೇಸ್ಟ್ ಕೆಲಸವಾಗಿದೆ,” ಎಂದು ಟೀಕಿಸಿದರು.
ತಿದ್ದಿಕೊಳ್ಳಿ ಎಂದು ಎಚ್ಚರಿಕೆ
“ಕಾನೂನಿನ ಪ್ರಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಎಲ್ಲ ಜನಾಂಗದ ಗಣತಿ ಮಾಡುವ ಅಧಿಕಾರವಿಲ್ಲ. ಈ ಸಮೀಕ್ಷೆ ಕೇವಲ ರಾಜಕೀಯ ಉದ್ದೇಶಕ್ಕಾಗಿ ನಡೆಯುತ್ತಿದೆ. ಇದನ್ನು ಸರಿಪಡಿಸಲು ಇನ್ನೂ ಅವಕಾಶವಿದೆ. ಸಿಎಂ ಸಿದ್ದರಾಮಯ್ಯ ತಿದ್ದಿಕೊಳ್ಳದಿದ್ದರೆ, ಇದು ಅವರ ರಾಜಕೀಯ ಅಧಪತನದ ಸಂಕೇತವಾಗಲಿದೆ,” ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.