ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್) ಜಾರಿಗೊಳಿಸುವ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಈ ಕ್ರಮವನ್ನು “ಬೆಂಗಳೂರಿನ ಸಿಲಿಕಾನ್ ಸಿಟಿ ಹೆಸರಿಗೇ ತಿರಸ್ಕಾರ” ಎಂದು ಬಣ್ಣಿಸಿದೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್, “2023ರ ಮೇ ತಿಂಗಳಿನಲ್ಲಿ ಇವಿಎಂ ಮೂಲಕ ಚುನಾಯಿತವಾದ ಕಾಂಗ್ರೆಸ್ ಸರಕಾರ, ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದೆ. ಅಂತಹ ಸಂಶಯ ಇದ್ದರೆ ಅಸೆಂಬ್ಲಿ ವಿಸರ್ಜಿಸಿ, ಮತ್ತೆ ಚುನಾವಣೆಗೆ ಹೋಗಿ” ಎಂದು ಸವಾಲು ಹಾಕಿದರು.
“ನಾವು ಗೆದ್ದಾಗ ಇವಿಎಂ ಚೆನ್ನಾಗಿದೆ, ಸೋತಾಗ ಅದರಲ್ಲಿ ದೋಷ ಎಂಬ ಧೋರಣೆಯು ತಮ್ಮನ್ನು ದೊಡ್ಡ ರಾಜಕೀಯ ಪಕ್ಷ ಎಂದು ಕರೆದುಕೊಳ್ಳುವ ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ” ಎಂದು ಅವರು ಟೀಕಿಸಿದರು. “ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಯುಗದಲ್ಲಿ ಕಾಂಗ್ರೆಸ್ ಸರಕಾರ ಕೃತಕ ಅಜ್ಞಾನ (ಆರ್ಟಿಫಿಶಿಯಲ್ ಇಗ್ನೊರೆನ್ಸ್) ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದು ರಾಜ್ಯದ ಭವಿಷ್ಯಕ್ಕೆ ಮಾರಕ” ಎಂದು ಅವರು ಆಕ್ಷೇಪಿಸಿದರು.
“ಬೆಂಗಳೂರು ಸಿಲಿಕಾನ್ ಸಿಟಿಗೆ ಅವಮಾನ”
ಬೆಂಗಳೂರು ಭಾರತದ ಸಿಲಿಕಾನ್ ಸಿಟಿಯಾಗಿ ಗುರುತಿಸಿಕೊಂಡಿದೆ. ಆದರೆ, ಇವಿಎಂ ಬದಲಿಗೆ ಮತಪತ್ರಕ್ಕೆ ಮರಳುವ ಕಾಂಗ್ರೆಸ್ ಸರಕಾರದ ನಿರ್ಧಾರವು ಈ ಗುರುತಿಗೆ ತಿರಸ್ಕಾರ ತೋರುವಂತಿದೆ ಎಂದು ಸುರೇಶ್ ಕುಮಾರ್ ಖಂಡಿಸಿದರು. “ತಮ್ಮ ನಾಯಕರನ್ನು ಮೆಚ್ಚಿಸಲು, ಅವರ ತಾಳಕ್ಕೆ ಕುಣಿಯಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಫೋನ್‌ಪೇ, ಡಿಜಿಟಲ್ ಪಾವತಿಗಳನ್ನೂ ತೆಗೆದು, ಕೇವಲ ಕರೆನ್ಸಿಗೆ ಮರಳುವ ಭಯವಿದೆ” ಎಂದು ಅವರು ವ್ಯಂಗ್ಯವಾಡಿದರು.

“ಇವಿಎಂ ವಿಶ್ವಾಸಾರ್ಹತೆಗೆ ಸುಪ್ರೀಂ ಕೋರ್ಟ್‌ನ ಮಾನ್ಯತೆ”
ಇವಿಎಂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಇತರ ದೇಶಗಳು ಕೂಡ ಭಾರತದ ಚುನಾವಣಾ ಪದ್ಧತಿಯನ್ನು ಮೆಚ್ಚಿಕೊಂಡಿವೆ. ಆದರೆ, ಕಾಂಗ್ರೆಸ್ ಸರಕಾರ ತಮ್ಮ ನಾಯಕರನ್ನು ಒಲಿಸಲು ಇವಿಎಂ ಬಳಕೆಯನ್ನು ವಿರೋಧಿಸುತ್ತಿದೆ ಎಂದು ಸುರೇಶ್ ಕುಮಾರ್ ಆರೋಪಿಸಿದರು. “ಉಪಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು ಸೇರಿದಂತೆ ಎಲ್ಲರೂ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ರಾಜ್ಯವನ್ನು ಹಳೆಯ ಯುಗಕ್ಕೆ ಕೊಂಡೊಯ್ಯುವ ಕ್ರಮ” ಎಂದು ಅವರು ಟೀಕಿಸಿದರು.
“ಕಾಂಗ್ರೆಸ್‌ಗೆ ಪ್ರಗತಿಯ ವಿರೋಧ”
“ನಮ್ಮ ದೇಶದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಕಾರ್ಯಕ್ರಮಗಳು, ಯೋಜನೆಗಳು ನಡೆಯುತ್ತಿವೆ. ಪ್ರಧಾನಮಂತ್ರಿಯವರು ಒಂದು ಬಟನ್ ಒತ್ತಿದರೆ ಕೋಟ್ಯಂತರ ರೈತರ ಖಾತೆಗೆ ನಿಮಿಷಗಳಲ್ಲಿ ಹಣ ಜಮೆಯಾಗುತ್ತದೆ. ಆದರೆ, ಕಾಂಗ್ರೆಸ್‌ಗೆ ಪ್ರಗತಿ ಮತ್ತು ಭವಿಷ್ಯದ ದೃಷ್ಟಿ ಎಂಬುದು ವಿರೋಧಾರ್ಥಕ ಪದಗಳಾಗಿವೆ” ಎಂದು ಅವರು ಕಿಡಿಕಾರಿದರು.
“ಕಾಂಗ್ರೆಸ್‌ನ ದಿವಾಳಿತನ”
ಕಾಂಗ್ರೆಸ್‌ನ ಕೆಲವು ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿದ ಸುರೇಶ್ ಕುಮಾರ್, “ಸಚಿವ ಡಾ. ಪರಮೇಶ್ವರ್ ಅವರು ‘ಹೆಂಗ್ ಗುದ್ತಾ ಇದ್ವಿ ಗೊತ್ತಾ’ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 1991ರ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮೋಸ ಮಾಡಿ ತಮ್ಮನ್ನು ಸೋಲಿಸಿದ್ದಾಗಿ ಹೇಳಿದ್ದಾರೆ. ಸಿದ್ದರಾಮಯ್ಯನವರ ಆಪ್ತ ಸಿ.ಎಂ. ಇಬ್ರಾಹಿಂ ಅವರು, ಬಾದಾಮಿಯಲ್ಲಿ ಒಂದು ಮತಕ್ಕೆ 3 ಸಾವಿರ ರೂ. ಕೊಟ್ಟು ಗೆಲ್ಲಿಸಿದ್ದಾಗಿ, ಆ ಹಣವನ್ನು ಸಿದ್ದರಾಮಯ್ಯ ವಾಪಸ್ ಕೊಟ್ಟದ್ದಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್‌ನ ಬೌದ್ಧಿಕ ಮತ್ತು ನೈತಿಕ ದಿವಾಳಿತನವನ್ನು ತೋರಿಸುತ್ತದೆ” ಎಂದರು.
“ಸತ್ಯ ಹೇಳಿದವರಿಗೆ ಶಿಕ್ಷೆ”
ಕಾಂಗ್ರೆಸ್‌ನಲ್ಲಿ ಸತ್ಯ ಮಾತನಾಡುವುದು ಅಪರಾಧವೆಂದು ಆರೋಪಿಸಿದ ಸುರೇಶ್ ಕುಮಾರ್, “ರಾಹುಲ್ ಗಾಂಧಿಯವರು ವಯನಾಡು ಮತ್ತು ಅಮೇಥಿಯಲ್ಲಿ ಇವಿಎಂ ಮೂಲಕ ಗೆದ್ದಿದ್ದಾರೆ. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮತಚೋರಿ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ನ ರಾಜಣ್ಣ ಅವರು, ‘ಮತಪತ್ರ ತಯಾರಿಕೆಯೇ ನಮ್ಮ ಸರಕಾರದ ಕಾಲದಲ್ಲಿ ನಡೆದಿತ್ತು’ ಎಂದು ಸತ್ಯ ಹೇಳಿದ್ದಕ್ಕೆ ಅವರಿಗೆ ಶಿಕ್ಷೆಯಾಗಿದೆ” ಎಂದು ವಿವರಿಸಿದರು.
“ಶಿಲಾಯುಗಕ್ಕೆ ಮರಳುವ ಕಾಂಗ್ರೆಸ್”
“ಮತಪತ್ರ ಇದ್ದ ಕಾಲದಲ್ಲಿ ಫಲಿತಾಂಶಕ್ಕಾಗಿ ದಿನಗಟ್ಟಲೆ ಕಾಯಬೇಕಿತ್ತು. ಇವಿಎಂನಿಂದ ತಕ್ಷಣವೇ ಮಾಹಿತಿ ಲಭ್ಯವಾಗುತ್ತದೆ. ಕಾಗದರಹಿತ ಆಡಳಿತ, ಡಿಜಿಟಲ್ ವ್ಯವಹಾರಗಳು ಚಾಲ್ತಿಯಲ್ಲಿರುವಾಗ, ಕಾಂಗ್ರೆಸ್ ರಾಜ್ಯವನ್ನು ಶಿಲಾಯುಗಕ್ಕೆ ಕೊಂಡೊಯ್ಯಲು ಹೊರಟಿದೆ” ಎಂದು ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್ ಮತ್ತು ಕೊಪ್ಪಳ ಜಿಲ್ಲಾಧ್ಯಕ್ಷ ದಡೇಸಗೂರು ಬಸವರಾಜ್ ಉಪಸ್ಥಿತರಿದ್ದರು.