ಬೆಳಗಾವಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತಮ್ಮನ್ನು ಭೇಟಿಗೆ ಕರೆದಿಲ್ಲ, ಹೀಗಾಗಿ ಭೇಟಿಯಾಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಅವಶ್ಯಕತೆ ಉಂಟಾದರೆ ಭೇಟಿಯ ಬಗ್ಗೆ ಯೋಚಿಸುವುದಾಗಿ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಶಾಸಕರ ಜೊತೆ ಸುರ್ಜೇವಾಲಾ ಅವರ ಸಭೆಯ ಕುರಿತು ಪ್ರತಿಕ್ರಿಯಿಸಿದರು. “ಸಭೆ ಕರೆದಿರುವ ಉದ್ದೇಶವನ್ನು ಸುರ್ಜೇವಾಲಾ ಅವರನ್ನೇ ಕೇಳಬೇಕು. ಶಾಸಕರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಸರಿಪಡಿಸಲು ಈ ಸಭೆ ಆಯೋಜಿಸಲಾಗಿದೆ. ಶಾಸಕರು ಯಾಕೆ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂಬುದನ್ನು ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು” ಎಂದು ಹೇಳಿದರು.
ರಾಜು ಕಾಗೆ ಗೈರು: ಸಭೆಗೆ ಕಾರಣ
ಕಾಗವಾಡ ಶಾಸಕ ರಾಜು ಕಾಗೆ ಅವರ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಇಂದು ಬೆಳಗಾವಿಯಲ್ಲಿ ಮುಖ್ಯ ಸಭೆಯೊಂದಿಗೆ ಒತ್ತಡದ ಕಾರ್ಯಕ್ರಮ ಇತ್ತು. ಆದ್ದರಿಂದ ರಾಜು ಕಾಗೆ ನಾಳೆ ಬೆಂಗಳೂರಿಗೆ ತೆರಳಿ ಸುರ್ಜೇವಾಲಾ ಅವರನ್ನು ಭೇಟಿಯಾಗಲಿದ್ದಾರೆ. ಸುರ್ಜೇವಾಲಾ ಇನ್ನೂ ಎರಡು ದಿನ ರಾಜ್ಯದಲ್ಲಿರುವುದರಿಂದ, ಯಾರು ಬೇಕಾದರೂ ಅವರನ್ನು ಭೇಟಿಯಾಗಬಹುದು. ರಾಜು ಕಾಗೆ ತಮ್ಮ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಅನುದಾನ ಕೋರಿದ್ದಾರೆ” ಎಂದು ತಿಳಿಸಿದರು.
ಹುಕ್ಕೇರಿ ಗಲಾಟೆ: ವೈಯಕ್ತಿಕ ವಿಷಯ
ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದ ಗಲಾಟೆ ಕುರಿತು ಮಾತನಾಡಿದ ಸಚಿವರು, “ಈ ಘಟನೆ ವೈಯಕ್ತಿಕವಾಗಿದ್ದು, ಶ್ರೀರಾಮ ಸೇನೆಗೆ ಯಾವುದೇ ಸಂಬಂಧವಿಲ್ಲ. ಕೆಲವರು ಮನೆಗೆ ಬಂದು ಹೆಣ್ಣುಮಕ್ಕಳ ಜೊತೆ ಜಗಳ ಆರಂಭಿಸಿದ್ದಕ್ಕೆ ಈ ಗಲಾಟೆಯಾಗಿದೆ. ಎರಡೂ ಕಡೆಯವರ ವಿರುದ್ಧ ಕೇಸ್ ದಾಖಲಾಗಿದೆ. ಶ್ರೀರಾಮ ಸೇನೆಯ ಕಾರ್ಯಕರ್ತರು ಒಳಗೊಂಡಿರಬಹುದು, ಆದರೆ ಈ ಘಟನೆಗೂ ಸಂಘಟನೆಗೂ ಸಂಬಂಧವಿಲ್ಲ. ಪೊಲೀಸರ ತಪ್ಪಿಲ್ಲ. ಜುಲೈ 3ರಂದು ಹುಕ್ಕೇರಿಯಲ್ಲಿ ಬಂದ್ ಮಾಡುವುದಿದ್ದರೆ ಮಾಡಲಿ” ಎಂದು ಹೇಳಿದರು.
ರಾಜು ಕಾಗೆಯಿಂದ ಸ್ಪಷ್ಟನೆ
ಕಾಗವಾಡ ಶಾಸಕ ರಾಜು ಕಾಗೆ, ಸುರ್ಜೇವಾಲಾ ಭೇಟಿಯ ಕುರಿತು ಮಾತನಾಡಿದರು. “ಹೈಕಮಾಂಡ್‌ನ ಸಭೆ ಕುರಿತು ಭಾನುವಾರ ತಡರಾತ್ರಿ ಮಾಹಿತಿ ಬಂದಿತು. ಆದರೆ ಇಂದು ಸಾರಿಗೆ ಇಲಾಖೆಯ ಸಭೆ ಈಗಾಗಲೇ ನಿಗದಿಯಾಗಿತ್ತು. ಆದ್ದರಿಂದ, ಇಂದು ರಾತ್ರಿ ಬೆಂಗಳೂರಿಗೆ ತೆರಳಿ, ನಾಳೆ ಬೆಳಗ್ಗೆ 11 ಗಂಟೆಗೆ ಸುರ್ಜೇವಾಲಾ ಅವರನ್ನು ಭೇಟಿಯಾಗುವೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವೆ” ಎಂದು ತಿಳಿಸಿದರು.