ಮಂಗಳೂರು, ಮೇ 5: ಬಜ್ಪೆಯ ಕಿನ್ನಿಪದವಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪರೋಕ್ಷ ಸಹಕಾರವೇ ಕಾರಣ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತೀಯವಾದಿಗಳು ಒಂದು ತಿಂಗಳ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆಯನ್ನು ನೀಡಿದ್ದರು ಮತ್ತು ಹತ್ಯೆಯ ನಂತರ “ಫಿನಿಶ್” ಎಂದು ಬರೆದಿದ್ದರು. ಇದು ಪೊಲೀಸ್ ಇಲಾಖೆಯ ನಿಷ್ಫಲತೆಗೆ ಸಾಕ್ಷಿಯಾಗಿದೆ ಎಂದು ಕಾಮತ್ ಆರೋಪಿಸಿದರು. “ಮತಾಂಧರ ಈ ಧೈರ್ಯಕ್ಕೆ ಕಾಂಗ್ರೆಸ್ ಸರ್ಕಾರದ ಬೆಂಬಲವೇ ಕಾರಣ. ರಾಜ್ಯದ ಗೃಹಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಓಲೈಕೆ ರಾಜಕಾರಣದ ಭಾಗವಾಗಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಹಿಂದೂ ನಾಯಕರನ್ನು ಕಡೆಗಣಿಸಿ ಕೇವಲ ಮುಸ್ಲಿಂ ಮುಖಂಡರ ಸಭೆ ನಡೆಸಿದ್ದಾರೆ. ಇವರು ಕೇವಲ ಒಂದು ಸಮುದಾಯಕ್ಕಲ್ಲ, ಇಡೀ ರಾಜ್ಯಕ್ಕೆ ಸಚಿವರು ಎಂಬುದನ್ನು ಮರೆಯಬಾರದು,” ಎಂದು ಅವರು ಕಿಡಿಕಾರಿದರು.
ತನಿಖೆ ಎನ್‌ಐಎಗೆ ವಹಿಸಲು ಆಗ್ರಹ:
ಸುಹಾಸ್ ಶೆಟ್ಟಿಯವರನ್ನು ಪೊಲೀಸ್ ಠಾಣೆಗೆ ಕರೆಸಿ, ಯಾವುದೇ ಆಯುಧಗಳನ್ನು ಇಡದಂತೆ ಸೂಚಿಸಿದ ನಂತರವೇ ಈ ಕೊಲೆ ನಡೆದಿದೆ ಎಂದು ಆರೋಪಿಸಿದ ಕಾಮತ್, “ಸರ್ಕಾರವೇ ಈ ಹತ್ಯೆಗೆ ನೇರ ಹೊಣೆಗಾರ. ಈ ಪ್ರಕರಣದ ತನಿಖೆಯನ್ನು ಕೂಡಲೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕು. ಜೊತೆಗೆ ಸರ್ಕಾರವು ಸುಹಾಸ್ ಶೆಟ್ಟಿಯವರ ಕುಟುಂಬಕ್ಕೆ ಪರಿಹಾರ ನೀಡಬೇಕು,” ಎಂದು ಒತ್ತಾಯಿಸಿದರು.
ಸ್ಪೀಕರ್ ಹೇಳಿಕೆಗೆ ಟೀಕೆ:
ವಿಧಾನಸಭಾಧ್ಯಕ್ಷರು ತನಿಖೆಗೂ ಮುನ್ನವೇ ಈ ಕೊಲೆಯಲ್ಲಿ ಫಾಸಿಲ್ ಕುಟುಂಬದ ಕೈವಾಡವಿಲ್ಲ, ಇದು ಕೇವಲ ಗ್ಯಾಂಗ್‌ವಾರ್ ಎಂದು ಹೇಳಿದ್ದರು. ಆದರೆ, ಫಾಸಿಲ್ ಸಹೋದರನೇ ಈ ಕೊಲೆಯ ಸೂತ್ರಧಾರಿ ಎಂಬುದು ಈಗ ಬಹಿರಂಗವಾಗಿದೆ ಎಂದು ಕಾಮತ್ ತಿಳಿಸಿದರು. “ಸ್ಪೀಕರ್‌ರವರು ತಮ್ಮ ಹೇಳಿಕೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ,” ಎಂದು ಸವಾಲು ಹಾಕಿದರು.
‘ಆಂಟಿ ಕಮ್ಯುನಲ್ ಫೋರ್ಸ್’ ವಿರುದ್ಧ ಆಕ್ಷೇಪ:
ಗೃಹ ಸಚಿವರು ಜಿಲ್ಲೆಯಲ್ಲಿ ‘ಆಂಟಿ ಕಮ್ಯುನಲ್ ಫೋರ್ಸ್’ ರಚಿಸುವುದಾಗಿ ಘೋಷಿಸಿದ್ದಾರೆ. ಆದರೆ, ಇದು ವಾಸ್ತವದಲ್ಲಿ ಹಿಂದೂಗಳನ್ನೇ ಗುರಿಯಾಗಿಸಿಕೊಳ್ಳುವ ‘ಆಂಟಿ ಹಿಂದೂ ಫೋರ್ಸ್’ ಆಗಲಿದೆ ಎಂದು ಕಾಮತ್ ಆತಂಕ ವ್ಯಕ್ತಪಡಿಸಿದರು. “ಇಂತಹ ಹಿಂದೂ ವಿರೋಧಿ ಧೋರಣೆಯ ಸರ್ಕಾರದಿಂದ ಸುಹಾಸ್ ಶೆಟ್ಟಿಯವರ ಸಾವಿಗೆ ನ್ಯಾಯ ಸಿಗುವುದು ಅಸಾಧ್ಯ,” ಎಂದು ಅವರು ಆರೋಪಿಸಿದರು.