ಬೆಂಗಳೂರು: ಅಕ್ಷಯ ತೃತೀಯದ ಶುಭ ದಿನದಂದು ನಿರ್ದೇಶಕ ಸುಕ್ಕ ಸೂರಿ ಮತ್ತು ಯುವರಾಜ್ಕುಮಾರ್ ಅವರ ಹೊಸ ಸಿನಿಮಾಕ್ಕೆ ಅಧಿಕೃತ ಚಾಲನೆ ದೊರೆತಿದೆ. ಪಿಆರ್ಕೆ, ಕೆಆರ್ಜಿ ಸ್ಟುಡಿಯೋಸ್ ಮತ್ತು ಜಯಣ್ಣ ಫಿಲ್ಮ್ಸ್ ಬ್ಯಾನರ್ನಡಿ ತಯಾರಾಗುತ್ತಿರುವ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಕ್ಲಾಪ್ ಮಾಡಿದರೆ, ದಿವಂಗತ ಪುನೀತ್ ರಾಜ್ಕುಮಾರ್ ಅವರ ಪುತ್ರಿ ಧೃತಿ ಪುನೀತ್ ರಾಜ್ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವರಾಜ್ಕುಮಾರ್ ಕುಟುಂಬ, ಅಶ್ವಿನಿ ಪುನೀತ್ ರಾಜ್ಕುಮಾರ್, ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ನಿರ್ದೇಶಕ ಸೂರಿ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.
ಈ ಚಿತ್ರದಲ್ಲಿ ಯುವರಾಜ್ಕುಮಾರ್ ನಾಯಕನಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ ವಿಜಯ್ಕುಮಾರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಿತನ್ಯಾ ಈಗಾಗಲೇ ‘ಲ್ಯಾಂಡ್ ಲಾರ್ಡ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಇದು ಆಕೆಯ ಎರಡನೇ ಚಿತ್ರವಾಗಿದೆ. ಯುವರಾಜ್ಕುಮಾರ್ಗೆ ಇದು ಮೂರನೇ ಚಿತ್ರವಾಗಿದೆ. ಸೂರಿ ಅವರ ವಿಶಿಷ್ಟ ಶೈಲಿಯ ನಿರ್ದೇಶನದಲ್ಲಿ ಯುವರಾಜ್ ಹೇಗೆ ಮಿಂಚಲಿದ್ದಾರೆ ಎಂಬ ಕುತೂಹಲ ಈಗಾಗಲೇ ಚಿತ್ರರಸಿಕರಲ್ಲಿ ಮೂಡಿದೆ.
ಚಿತ್ರದ ತಾಂತ್ರಿಕ ತಂಡದಲ್ಲಿ ದೀಪು ಎಸ್ ಕುಮಾರ್ (ಸಂಕಲನ), ಚರಣ್ ರಾಜ್ (ಸಂಗೀತ), ಸಂತೋಷ್ (ಕಲಾ ನಿರ್ದೇಶನ) ಮತ್ತು ಶೇಖರ್ (ಛಾಯಾಗ್ರಹಣ) ಸೇರಿದ್ದಾರೆ. ಚಿತ್ರೀಕರಣವು ಮೇ ತಿಂಗಳಾಂತ್ಯದ ವೇಳೆಗೆ ಆರಂಭವಾಗಲಿದ್ದು, ಈ ದೊಡ್ಡ ಬ್ಯಾನರ್ನಡಿ ಚಿತ್ರವು ಭವ್ಯವಾಗಿ ತಯಾರಾಗಲಿದೆ.
‘ಎಕ್ಕ’ ಚಿತ್ರ ಜೂನ್ನಲ್ಲಿ ತೆರೆಗೆ: ಇದೇ ಬ್ಯಾನರ್ನಡಿ ಯುವರಾಜ್ಕುಮಾರ್ ನಾಯಕನಾಗಿ, ರೋಹಿತ್ ಪದಕಿ ನಿರ್ದೇಶನದ ‘ಎಕ್ಕ’ ಚಿತ್ರವು ಜೂನ್ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟೀಸರ್ ಮತ್ತು ಟೈಟಲ್ ಟ್ರ್ಯಾಕ್ ಈಗಾಗಲೇ ಭಾರೀ ಜನಪ್ರಿಯತೆ ಗಳಿಸಿದ್ದು, ಚಿತ್ರೀಕರಣವು ಭರದಿಂದ ಸಾಗುತ್ತಿದೆ.
ಈ ಹೊಸ ಚಿತ್ರದ ಘೋಷಣೆಯೊಂದಿಗೆ, ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ದೊಡ್ಡ ಪ್ರಾಜೆಕ್ಟ್ಗೆ ಅಡಿಪಾಯ ಹಾಕಲಾಗಿದೆ.