ಬೆಂಗಳೂರು: ಮಲೇಷ್ಯಾದ ಪೆನಾಂಗ್ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಕರ್ನಾಟಕದೊಂದಿಗೆ ಸೆಮಿಕಂಡಕ್ಟರ್, ಡೀಪ್ಟೆಕ್, ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಸಿಟಿ ಮತ್ತು ಕೌಶಲ್ಯ ಬೆಳವಣಿಗೆ ಕ್ಷೇತ್ರಗಳಲ್ಲಿ ಸಹಯೋಗದ ಸಾಧ್ಯತೆಗಳನ್ನು ಚರ್ಚಿಸಿದೆ. ಬೆಂಗಳೂರಿನಲ್ಲಿ ನಡೆದ ಫಲಪ್ರದ ಸಭೆಯಲ್ಲಿ ಪೆನಾಂಗ್ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೊ ನೇತೃತ್ವದ ನಿಯೋಗವು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.
ಪೆನಾಂಗ್ ನಿಯೋಗದಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಪೆನಾಂಗ್ ದ್ವೀಪ ನಗರ ಮಂಡಳಿ ಪ್ರತಿನಿಧಿಗಳು ಹಾಗೂ ಚೆನ್ನೈನ ಮಲೇಷ್ಯಾ ಕಾನ್ಸುಲೇಟ್ ಜನರಲ್ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಅವರೂ ಸಭೆಯಲ್ಲಿ ಇದ್ದರು.

ಸಭೆಯಲ್ಲಿ ಸಾಫ್ಟ್ವೇರ್, ಸಂಶೋಧನೆ-ಅಭಿವೃದ್ಧಿ, ಚಿಪ್ ವಿನ್ಯಾಸ, ನವೋದ್ಯಮ ಮತ್ತು ಪ್ರತಿಭಾನ್ವಿತ ತಂತ್ರಜ್ಞರ ಲಭ್ಯತೆಯಂತಹ ಕ್ಷೇತ್ರಗಳಲ್ಲಿ ಸಹಯೋಗಕ್ಕಾಗಿ ತಿಳಿವಳಿಕೆ ಒಡಂಬಡಿಕೆ (MoU) ಸಹಿ ಹಾಕುವ ಬಗ್ಗೆ ಚರ್ಚೆ ನಡೆಯಿತು. ಪೆನಾಂಗ್ ನಿಯೋಗವು ಈ ನಿಟ್ಟಿನಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದು, ಕರ್ನಾಟಕ ಸರ್ಕಾರವೂ ಉತ್ಸಾಹ ತೋರಿದೆ.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ಕರ್ನಾಟಕದ ತಂತ್ರಜ್ಞಾನ ಪ್ರಗತಿಯು ಶಿಕ್ಷಣ, ಕೌಶಲ್ಯ, ನವೋದ್ಯಮ, ಸಂಶೋಧನೆ ಮತ್ತು ಉದ್ಯಮಗಳ ಸಂಘಟಿತ ಕೆಲಸದ ಮೇಲೆ ನಿರ್ಮಿತವಾಗಿದೆ. ಪೆನಾಂಗ್ ಹಾರ್ಡ್ವೇರ್ ಹಾಗೂ ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಅಪಾರ ಸಾಧನೆ ಮಾಡಿದೆ. ಕರ್ನಾಟಕ ಚಿಪ್ ವಿನ್ಯಾಸ, ಸಾಫ್ಟ್ವೇರ್ ಮತ್ತು ಅತ್ಯಾಧುನಿಕ ಎಂಜಿನಿಯರಿಂಗ್ ಪ್ರತಿಭೆಗಳ ನೆಲೆಯಾಗಿದೆ. ಜಾಗತಿಕ ಸೆಮಿಕಂಡಕ್ಟರ್ ತಂತ್ರಜ್ಞರ ಬೇಡಿಕೆಯನ್ನು ಎರಡೂ ರಾಜ್ಯಗಳು ಜಂಟಿಯಾಗಿ ಈಡೇರಿಸಬಹುದು” ಎಂದರು.
ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಶೇ. 7.5ರಷ್ಟು ಪಾಲು ಹೊಂದಿರುವ ಪೆನಾಂಗ್, ಅಡ್ವಾನ್ಸ್ಡ್ ಸೆಮಿಕಂಡಕ್ಟರ್ ಮತ್ತು ಐಸಿ ಚಿಪ್ ವಿನ್ಯಾಸ ಎಂಜಿನಿಯರ್ಗಳ ಬೇಡಿಕೆಯನ್ನು ಪ್ರಮುಖವಾಗಿ ಚರ್ಚಿಸಿತು. ಇಂಟೆಲ್, ಎನ್ವಿಡಿಯಾ, ಆ್ಯಪಲ್, ಎಎಂಡಿ ನಂತಹ ಕಂಪನಿಗಳೊಂದಿಗೆ ಕೆಲಸ ಮಾಡುವ ಪ್ರತಿಭಾನ್ವಿತರನ್ನು ಹೊಂದಿರುವ ಕರ್ನಾಟಕದೊಂದಿಗಿನ ಸಹಯೋಗಕ್ಕೆ ಪೆನಾಂಗ್ ಹೆಚ್ಚಿನ ಒಲವು ತೋರಿದೆ.
ಚಿಪ್ ಡಿಸೈನ್, ಅಡ್ವಾನ್ಸ್ಡ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉದ್ಯಮ-ಶೈಕ್ಷಣಿಕ ಸಂಸ್ಥೆಗಳ ಪಾಲುದಾರಿಕೆ, ಪ್ರತಿಭಾನ್ವಿತರ ವಿನಿಮಯ ಕಾರ್ಯಕ್ರಮ ಮತ್ತು ಜಂಟಿ ಕೌಶಲ್ಯ-ಪ್ರಮಾಣಪತ್ರ ಕಾರ್ಯಕ್ರಮಗಳ ಬಗ್ಗೆಯೂ ವಿವರವಾಗಿ ಚರ್ಚೆ ನಡೆಯಿತು. ಈ ಸಹಯೋಗದಿಂದ ಎರಡೂ ರಾಜ್ಯಗಳ ತಂತ್ರಜ್ಞಾನ ಕ್ಷೇತ್ರ ಬಲಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.












