ನವದೆಹಲಿ: ಕೇಂದ್ರ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ರಾಜಧಾನಿ ನವದೆಹಲಿಯಲ್ಲಿ ವಿಶೇಷ ಉಕ್ಕು (ಸ್ಪೆಷಾಲಿಟಿ ಸ್ಟೀಲ್) ಉತ್ಪಾದನೆಗೆ ಸಂಬಂಧಿಸಿದ ಉತ್ಪಾದನಾ ಉತ್ತೇಜನಾ ಯೋಜನೆ (PLI)ಯ 3ನೇ ಸುತ್ತಿನ PLI 1.2ಗೆ ಚಾಲನೆ ನೀಡಿದರು. ಈ ಯೋಜನೆಯಿಂದ ₹43,874 ಕೋಟಿ ಮೊತ್ತದ ಹೂಡಿಕೆ ಆಕರ್ಷಿಸುವ ನಿರೀಕ್ಷೆಯಿದ್ದು, 30,760 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವರು ತಿಳಿಸಿದರು.
2011ರ ಜುಲೈನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ₹6,322 ಕೋಟಿ ಮೊತ್ತದ PLI ಯೋಜನೆಯಡಿ ರಕ್ಷಣೆ, ಏರೋಸ್ಪೇಸ್, ಆಟೋಮೊಬೈಲ್, ಇಂಧನ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಬಳಕೆಯಾಗುವ ಉನ್ನತ ದರ್ಜೆಯ ಉಕ್ಕಿನ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ. ಈ ಯೋಜನೆಯಿಂದ ದೇಶದಲ್ಲಿ 14.3 ಮಿಲಿಯನ್ ಟನ್ ಹೊಸ ಸ್ಪೆಷಾಲಿಟಿ ಸ್ಟೀಲ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳವಾಗಲಿದೆ.
ಸೆಪ್ಟೆಂಬರ್ 2025ರವರೆಗಿನ ಮಾಹಿತಿ ಪ್ರಕಾರ, ಮೊದಲ ಎರಡು ಸುತ್ತುಗಳಲ್ಲಿ ಭಾಗವಹಿಸಿದ ಕಂಪನಿಗಳು ₹22,973 ಕೋಟಿ ಹೂಡಿಕೆ ಮಾಡಿ 13,284 ಉದ್ಯೋಗಗಳನ್ನು ಸೃಷ್ಟಿಸಿವೆ. ಹಿಂದಿನ PLI ಸುತ್ತುಗಳಿಂದ ಒಟ್ಟು 31,000ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸಚಿವ ಕುಮಾರಸ್ವಾಮಿ ತಿಳಿಸಿದರು.

PLI 1.2: ಮುಂದುವರಿದ ಉಕ್ಕು ವರ್ಗಗಳಿಗೆ ಒತ್ತು
PLI 1.2 ಸುತ್ತು ಸೂಪರ್ ಮಿಶ್ರಲೋಹಗಳು, CRGO ಉಕ್ಕು, ಸ್ಟೇನ್ಲೆಸ್ ಸ್ಟೀಲ್ ಉದ್ದ ಮತ್ತು ಸಮತಟ್ಟಾದ ಉತ್ಪನ್ನಗಳು, ಟೈಟಾನಿಯಂ ಮಿಶ್ರಲೋಹಗಳು ಹಾಗೂ ಲೇಪಿತ ಉಕ್ಕುಗಳಂತಹ ಮುಂದುವರಿದ ವರ್ಗಗಳಲ್ಲಿ ಹೂಡಿಕೆ ಆಕರ್ಷಿಸಲಿದೆ. ಈ ಯೋಜನೆ ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಜೊತೆಗೆ ಅಸ್ತಿತ್ವದಲ್ಲಿರುವ ಉತ್ಪಾದಕರ ಸಾಮರ್ಥ್ಯ ವಿಸ್ತರಣೆಗೆ ಅವಕಾಶ ಕಲ್ಪಿಸಲಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರ ಬಲವರ್ಧನೆ
ಭಾರತ ಜಾಗತಿಕ ಅಗ್ರ ಉಕ್ಕು ಉತ್ಪಾದಕರ ಸಾಲಿಗೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ PLI ಯೋಜನೆ ರಫ್ತು-ನೇತೃತ್ವದ ಬೆಳವಣಿಗೆ, ತಾಂತ್ರಿಕ ನಾವೀನ್ಯತೆ ಮತ್ತು ಸುಸ್ಥಿರ ಉತ್ಪಾದನೆಗೆ ಒತ್ತು ನೀಡಲಿದೆ. “ಉಕ್ಕನ್ನು ಉತ್ಪಾದಿಸುವುದಷ್ಟೇ ಅಲ್ಲ, ಭಾರತದಿಂದ ಜಗತ್ತಿಗೆ ಸರಬರಾಜು ಮಾಡುವ ಗುರಿ ಹೊಂದಿದ್ದೇವೆ” ಎಂದು ಸಚಿವರು ಹೇಳಿದರು.
2047ರ ವಿಕಸಿತ ಭಾರತ ದೃಷ್ಟಿಗೆ ಸಹಕಾರಿ
PLI 1.2 ಆತ್ಮನಿರ್ಭರ ಭಾರತ, 2047ರ ವಿಕಸಿತ ಭಾರತ ಹಾಗೂ 2070ರ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಗಳ ಸಾಧನೆಗೆ ಪೂರಕವಾಗಲಿದೆ. “ಭಾರತೀಯ ಉಕ್ಕಿನ ಕಥೆ ಭಾರತದ ಪ್ರಗತಿಯ ಕಥೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಮುಂದುವರಿದಿದ್ದೇವೆ” ಎಂದು ಸಚಿವ ಕುಮಾರಸ್ವಾಮಿ ಉಲ್ಲೇಖಿಸಿದರು.
“ನಿರಂತರ ಹೂಡಿಕೆ, ತಂತ್ರಜ್ಞಾನ ಪಾಲುದಾರಿಕೆ ಮತ್ತು ರಫ್ತು ವಿಸ್ತರಣೆಯೊಂದಿಗೆ ಭಾರತ ತನ್ನ ದೇಶೀಯ ಬೇಡಿಕೆ ಪೂರೈಸುವುದಲ್ಲದೆ, ಅತ್ಯಾಧುನಿಕ ಉಕ್ಕಿನ ಉತ್ಪನ್ನಗಳ ಜಾಗತಿಕ ಪೂರೈಕೆದಾರನಾಗಿ ಹೊರಹೊಮ್ಮಲಿದೆ.”
— ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು












