ಬೆಂಗಳೂರು, ಮೇ 27, 2025: ಕೇಂದ್ರ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮೂರು ತಿಂಗಳ ಕಾಲಮಿತಿ ವಿಧಿಸಿ ಒತ್ತಡ ಹೇರಿದರೆ, ರಾಜ್ಯ ಬಿಜೆಪಿ ನಾಯಕರು ಈ ಯೋಜನೆಯ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ. ಈ ಕುರಿತು ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಲಿಖಿತ ದೂರು ಸಲ್ಲಿಸುವುದಾಗಿ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಮೇಶ್ ಬಾಬು ಮತ್ತು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸ್ಮಾರ್ಟ್ ಮೀಟರ್ ವಿಷಯದಲ್ಲಿ ಬಿಜೆಪಿ-ಜೆಡಿಎಸ್‌ನ ಆರೋಪಗಳಿಗೆ ತಿರುಗೇಟು ನೀಡಿದರು. “ಸ್ಮಾರ್ಟ್ ಮೀಟರ್‌ನಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆ ರಾಜ್ಯದಲ್ಲಿ ಜಾರಿಯಾಗದಂತೆ ಬಿಜೆಪಿಯೇ ಅಡ್ಡಿಪಡಿಸುತ್ತಿದೆ. ಡಾ. ಅಶ್ವತ್ಥ ನಾರಾಯಣ ಅವರ ಸುಳ್ಳು ಆರೋಪಗಳಿಗೆ ಕೆಪಿಸಿಸಿ ವತಿಯಿಂದ ಕೇಂದ್ರ ಸಚಿವರಿಗೆ ಪತ್ರ ಬರೆಯಲಿದ್ದೇವೆ,” ಎಂದು ರಮೇಶ್ ಬಾಬು ಹೇಳಿದರು.
“ಅಶ್ವತ್ಥ ನಾರಾಯಣ ಅವರ ಆರೋಪವನ್ನು ಎರಡು ದೃಷ್ಟಿಕೋನದಿಂದ ನೋಡಬೇಕು. ಟೆಂಡರ್ ಪಡೆಯಲು ಪ್ರಯತ್ನಿಸಿ, ಸಿಗದ ಕಾರಣ ಆರೋಪ ಮಾಡುತ್ತಿದ್ದಾರಾ? ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಯಶಸ್ವಿ ಸಚಿವರಾಗಿದ್ದಾರೆ. ಅವರ ಮೇಲೆ ಸತತ ಸುಳ್ಳು ಆರೋಪಗಳೇಕೆ?” ಎಂದು ಅವರು ಪ್ರಶ್ನಿಸಿದರು. “ಅಶ್ವತ್ಥ ನಾರಾಯಣ 900 ರೂ.ಗೆ ಸ್ಮಾರ್ಟ್ ಮೀಟರ್ ಸಿಗುತ್ತದೆ ಎಂದಿದ್ದಾರೆ. ಆದರೆ, ಇದು ಕೇಂದ್ರದ ಸಬ್ಸಿಡಿ ಮೊತ್ತ, ಮೀಟರ್‌ನ ಬೆಲೆಯಲ್ಲ. ಇದನ್ನು ತಿರುಚಿ ಜನರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನವಾಗಿದೆ,” ಎಂದರು.
ಕೇಂದ್ರದ ಯೋಜನೆಗೆ ಬಿಜೆಪಿ ಅಡ್ಡಗಾಲು
ರಮೇಶ್ ಬಾಬು ಮಾತನಾಡಿ, “2021-22ರಲ್ಲಿ ಕೇಂದ್ರದ RDSS ಯೋಜನೆಯಡಿ ಸ್ಮಾರ್ಟ್ ಮೀಟರ್‌ಗೆ ಪ್ರತಿ ಮೀಟರ್‌ಗೆ 900 ರೂ. ಸಬ್ಸಿಡಿ ಘೋಷಿಸಲಾಗಿತ್ತು. 27 ರಾಜ್ಯಗಳು ಈ ಯೋಜನೆಯಡಿ ಸ್ಮಾರ್ಟ್ ಮೀಟರ್ ಅಳವಡಿಸಿವೆ. ಆದರೆ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಈ ಯೋಜನೆ ಜಾರಿಗೊಳಿಸಲಿಲ್ಲ, ರೈತರ ಉಚಿತ ವಿದ್ಯುತ್ ಯೋಜನೆಗೆ ತೊಡಕಾಗುತ್ತದೆ ಎಂದು ಕೇಂದ್ರಕ್ಕೆ ಪತ್ರ ಬರೆದಿತ್ತು. ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ,” ಎಂದು ಟೀಕಿಸಿದರು.
“ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ 2024ರ ನಿಯಮಾವಳಿಯಂತೆ, ತಾತ್ಕಾಲಿಕ ಮತ್ತು ಹೊಸ ಸ್ಥಾಪನಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸೂಚಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದ್ದು, ಇಂಧನ ಸಚಿವರು ಸ್ಪಷ್ಟನೆ ನೀಡಿದ್ದಾರೆ,” ಎಂದು ರಮೇಶ್ ಬಾಬು ತಿಳಿಸಿದರು.
900 ರೂ.ಗೆ ಮೀಟರ್ ಕೊಡಲಿ: ಲಕ್ಷ್ಮಣ್
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, “ಅಶ್ವತ್ಥ ನಾರಾಯಣ 15,698 ಕೋಟಿ ಹಗರಣ ಎಂದಿದ್ದಾರೆ. ಅದು ಹೇಗೆ ಎಂದು ಸ್ಪಷ್ಟಪಡಿಸಲಿ. 900 ರೂ.ಗೆ ಸ್ಮಾರ್ಟ್ ಮೀಟರ್ ಸಿಗುತ್ತದೆ ಎಂದಿದ್ದಾರೆ. ಆ ಗುತ್ತಿಗೆದಾರರ ಗುರುತು ತಿಳಿಸಲಿ. ಅವರಿಗೆ ಈ ಯೋಜನೆಯ ಜವಾಬ್ದಾರಿ ನೀಡಬಹುದು. ಸಹ್ಯಾದ್ರಿ ಸಂಸ್ಥೆಯ ಟೆಂಡರ್ ವಜಾಗೊಂಡ ಬಳಿಕ ಅವರು ಆರೋಪ ಮಾಡುತ್ತಿದ್ದಾರೆ. 2011ರಿಂದ ಅವರ ಅನಾಚಾರಗಳ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ,” ಎಂದರು.
ಸ್ಮಾರ್ಟ್ ಮೀಟರ್‌ನ ಸತ್ಯಾಸತ್ಯತೆ
ಕರ್ನಾಟಕದಲ್ಲಿ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್‌ನ ದರ 4,998 ರೂ. ಆಗಿದ್ದು, ಗ್ರಾಹಕರೇ ಈ ವೆಚ್ಚ ಭರಿಸಬೇಕು. ತಾಂತ್ರಿಕ ನಿರ್ವಹಣೆಗೆ ತಿಂಗಳಿಗೆ 75 ರೂ. ಬೆಸ್ಕಾಂ ಭರಿಸುತ್ತದೆ. ಇತರ ರಾಜ್ಯಗಳಲ್ಲಿ ಮೀಟರ್ ವೆಚ್ಚವನ್ನು ಮಾಸಿಕ ಬಿಲ್‌ನಲ್ಲಿ ಕಂತು ರೂಪದಲ್ಲಿ ವಸೂಲಿ ಮಾಡಲಾಗುತ್ತದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ 10 ವರ್ಷಗಳಿಗೆ ಪ್ರತಿ ಮೀಟರ್‌ಗೆ ತಿಂಗಳಿಗೆ 115-148 ರೂ. ವಿಧಿಸಲಾಗುತ್ತದೆ. ಕರ್ನಾಟಕದಲ್ಲಿ ಕೇವಲ ತಾತ್ಕಾಲಿಕ ಮತ್ತು ಹೊಸ ಸ್ಥಾಪನಗಳಿಗೆ ಮೀಟರ್ ಅಳವಡಿಸುವುದರಿಂದ ವೆಚ್ಚ ಸಮಂಜಸವಾಗಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಸ್ನೈಡರ್, ಜೀನಸ್, ಓಪಸ್ ಮತ್ತು ಸಾಫ್ಟ್‌ವೇರ್ ಸೇವೆಗಾಗಿ ಬಿಸಿಐಟಿಎಸ್ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬಿಸಿಐಟಿಎಸ್ ಕಪ್ಪು ಪಟ್ಟಿಯಿಂದ ಮುಕ್ತವಾದ ಬಳಿಕವೇ ಒಪ್ಪಂದ ಮಾಡಲಾಗಿದೆ ಎಂದು ಕೆಪಿಸಿಸಿ ಸ್ಪಷ್ಟಪಡಿಸಿದೆ.