ಬೆಂಗಳೂರು: ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಆದೇಶಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಜಾರ್ಜ್, ಕೋರ್ಟ್‌ನ ತೀರ್ಪಿಗೆ ತಾನು ಬದ್ಧನಾಗಿರುವುದಾಗಿ ತಿಳಿಸಿದ್ದಾರೆ.
“ಕೋರ್ಟ್ ಎಫ್‌ಐಆರ್ ದಾಖಲಿಸಲು ಆದೇಶಿಸಿದ ದಾಖಲೆ ಇದ್ದರೆ ಕೊಡಿ, ನಾನು ಅದನ್ನು ಇನ್ನೂ ನೋಡಿಲ್ಲ. ದಾಖಲೆ ಸಿಕ್ಕರೆ ಪರಿಶೀಲಿಸುತ್ತೇನೆ,” ಎಂದು ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯ ಶಾಸಕ ಅಶ್ವತ್ಥನಾರಾಯಣ ನೇತೃತ್ವದ ತಂಡ ಹೈಕೋರ್ಟ್, ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ರಾಜ್ಯಪಾಲರ ಬಳಿ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ. “ಅವರು ಎಲ್ಲೆಲ್ಲಿ ದೂರು ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಕೋರ್ಟ್ ವಿವರಣೆ ಕೇಳಿದರೆ, ನಾನು ಸೂಕ್ತ ಉತ್ತರ ನೀಡಲು ಸಿದ್ಧನಿದ್ದೇನೆ,” ಎಂದು ಜಾರ್ಜ್ ಹೇಳಿದ್ದಾರೆ.
ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ಎಸ್.ಆರ್. ವಿಶ್ವನಾಥ್ ಮತ್ತು ಧೀರಜ್ ಮುನಿರಾಜು ಆರೋಪಿಸಿದ್ದಾರೆ. ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಗುತ್ತಿಗೆ ನೀಡಲು ಇತರ ಕಂಪನಿಗಳನ್ನು ಟೆಂಡರ್‌ನಿಂದ ತಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಆರೋಪದಡಿಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಎಫ್‌ಐಆರ್ ದಾಖಲಿಸಲು ಸೂಚಿಸಿದೆ.
“ಕಾನೂನಿನ ಪ್ರಕಾರ ಎಲ್ಲವನ್ನೂ ಎದುರಿಸುತ್ತೇನೆ. ಸುಮ್ಮನೆ ಹಿಟ್ ಅಂಡ್ ರನ್ ತಂತ್ರ ಯಾಕೆ? ಅವರು ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಿ. ನಮ್ಮ ವಕೀಲರು ನಮ್ಮ ಪರವಾಗಿ ವಾದ ಮಂಡಿಸುತ್ತಾರೆ. ಕೋರ್ಟ್‌ನ ಅಂತಿಮ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ,” ಎಂದು ಜಾರ್ಜ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆಯೂ ನಡೆಯುತ್ತಿದ್ದು, ಸ್ಮಾರ್ಟ್ ಮೀಟರ್‌ಗೆ ಸಂಬಂಧಿಸಿದ ಶುಲ್ಕದ ಬಗ್ಗೆ ಗೊಂದಲ ಎದ್ದಿದೆ. ಬೇರೆ ರಾಜ್ಯಗಳಲ್ಲಿ 900 ರೂ.ಗೆ ಲಭ್ಯವಿರುವ ಮೀಟರ್ ಕರ್ನಾಟಕದಲ್ಲಿ 10,000 ರೂ.ಗೆ ಒದಗಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ವಿಷಯದಲ್ಲಿ ಕೋರ್ಟ್ ಸಂಪೂರ್ಣ ಮಾಹಿತಿಯನ್ನು ಕೇಳಿದ್ದು, ಜುಲೈ 9ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಸಚಿವ ಜಾರ್ಜ್, “ನಾವು ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನೂ ಎದುರಿಸುತ್ತೇವೆ. ಕೋರ್ಟ್ ತೀರ್ಮಾನವೇ ಅಂತಿಮ,” ಎಂದು ಪುನರುಚ್ಚರಿಸಿದ್ದಾರೆ.