ಬೆಂಗಳೂರು: ಸ್ಯಾಂಟಲೈಟ್ ಬಸ್ ನಿಲ್ದಾಣದ ಮುಂಭಾಗ ಇಂದು ಬೆಳಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಮೈಸೂರು ಕಡೆಗೆ ಸಾಗುತ್ತಿದ್ದ ಕ್ಯಾಂಟರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಸ್, ಕಾರು, ಆಟೋ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದು ಅಪಾಯ ಸೃಷ್ಟಿಸಿದೆ.
ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಯಾಂಟಲೈಟ್ ಬಸ್ ನಿಲ್ದಾಣದಿಂದ ಹೊರಬರುತ್ತಿದ್ದ KSRTC ಐರಾವತ ಬಸ್‌ಗೂ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋಗೆ ಗುದ್ದಿದ ಪರಿಣಾಮ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಪಘಾತದ ರಭಸಕ್ಕೆ ಲಾರಿ ಮುಂಭಾಗ ನಜ್ಜುಗುಜ್ಜು
ಕ್ಯಾಂಟರ್ ಅಪಘಾತದ ರಭಸಕ್ಕೆ ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಳಿಕ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು ಲಾರಿ ನಿಂತಿದೆ. ಘಟನೆಯಲ್ಲಿ ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಚಾಲಕನ ಮೇಲೆ ಕುಡಿತದ ಅನುಮಾನ
ಕ್ಯಾಂಟರ್ ಚಾಲಕ ಕುಡಿದು ಲಾರಿ ಚಲಾಯಿಸುತ್ತಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರಿಂದ ಲಾರಿ ತೆರವು, ಸಂಚಾರ ನಿಯಂತ್ರಣ
ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಪಘಾತಗೊಂಡ ಲಾರಿಯನ್ನು ತೆರವುಗೊಳಿಸಿ ಸಂಚಾರ ನಿಯಂತ್ರಿಸಿದರು. ಈ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಾಹನ ಚಾಲಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಚಾತುರ್ಯ ಹಾಗೂ ಅಕ್ರಮವಾಗಿ ವಾಹನ ಚಲಾಯಿಸುವುದು ಅಪಾಯಕ್ಕೆ ಕಾರಣವಾಗಬಹುದು.