ಬೆಂಗಳೂರು: “ನಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುತ್ತಾರೆ, ಇಲ್ಲದಿದ್ದರೆ ಇಲ್ಲ. ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು” ಎಂದು ಬಿಎಂಎಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಹೋದರನ ರಾಜಕೀಯ ಭವಿಷ್ಯದ ಬಗ್ಗೆ ಹಿಂದೆ ನೀಡಿದ ಹೇಳಿಕೆಯನ್ನು ಸ್ಪಷ್ಟಪಡಿಸಿದರು. “ಆಸೆಯಿದೆ ಎಂದು ಹೇಳಿದ್ದೆ. ಅವರ ಹಣೆಯಲ್ಲಿ ಬರೆದಿದ್ದರೆ ಆಗುತ್ತದೆ, ಇಲ್ಲದಿದ್ದರೆ ಇಲ್ಲ. ಪಕ್ಷ ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಪಕ್ಷದ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಪಕ್ಷದ ಏಳಿಗೆಗೆ ಹಾಗೂ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ” ಎಂದರು.
ಪಕ್ಷನಿಷ್ಠರಾಗಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತಿದ್ದಾರೆ ಎಂದ ಅವರು, ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ಅವರು ಗಮನ ಹರಿಸುತ್ತಿಲ್ಲ ಎಂಬ ಪ್ರಶ್ನೆಗೆ, “ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಅದು ಅವರ ಕರ್ತವ್ಯ” ಎಂದು ಉತ್ತರಿಸಿದರು.
ನವೆಂಬರ್ 15ರ ನಂತರ ಏನಾದರೂ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ, “ನನಗೆ ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವ ನೆನಪಾಗುತ್ತದೆ. ನಾವೆಲ್ಲರೂ ಸೇರಿ ಈ ಹಬ್ಬವನ್ನು ಆಚರಿಸೋಣ. ಮಿಕ್ಕ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಎಐಸಿಸಿ ನಾಯಕರಿಗೆ ಕೇಳಿ” ಎಂದರು.
2028ಕ್ಕೆ ಸಿದ್ದರಾಮಯ್ಯ ಸ್ಪರ್ಧೆ ತಪ್ಪಿಲ್ಲ
2028ರ ಚುನಾವಣೆಗೂ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ಕೇಳಿದಾಗ, “ರಾಜಕೀಯದಲ್ಲಿ 95-98 ವರ್ಷ ಆದವರೂ ಇದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸುತ್ತೇನೆ ಎನ್ನುವುದರಲ್ಲಿ ಯಾವ ತಪ್ಪೂ ಇಲ್ಲ. ಅವರು ನಮ್ಮ ನಾಯಕರು. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸುತ್ತೇವೆ” ಎಂದರು.
ಸಿದ್ದರಾಮಯ್ಯ ಅನಿವಾರ್ಯರೇ ಎಂಬ ಪ್ರಶ್ನೆಗೆ, “ಒಬ್ಬ ನಾಯಕನಿಗೆ ಬೇಕಾದ ಎಲ್ಲ ಅವಕಾಶಗಳೂ ಅವರಿಗಿವೆ. ಎಲ್ಲರಿಗಿಂತ ಗಟ್ಟಿಯಾಗಿ ಓಡಾಡುತ್ತಿದ್ದಾರೆ. ದಿನನಿತ್ಯ ಕಾರ್ಯಕ್ರಮಗಳು ನಡೆಸುತ್ತಿದ್ದಾರೆ. ಉತ್ತಮ ಆಡಳಿತ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದರಲ್ಲಿ ತಪ್ಪಿಲ್ಲ” ಎಂದರು.
ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರದ ಬಗ್ಗೆ ಕೇಳಿದಾಗ, “ನನಗೆ ಹೆಚ್ಚು ಮಾಹಿತಿ ಇಲ್ಲ. ಇದು ಎರಡೂವರೆ ವರ್ಷದ ವಿಚಾರವಲ್ಲ. ಐದು ವರ್ಷ ಕೆಲಸ ಮಾಡಿ ಎಂದು ಜನ ಆಶೀರ್ವಾದ ಮಾಡಿದ್ದಾರೆ. 140 ಸ್ಥಾನಗಳನ್ನು ಕೊಟ್ಟಿದ್ದಾರೆ. ಜನರ ಹಿತ ಕಾಯಬೇಕು, ಮಾತು ಉಳಿಸಿಕೊಳ್ಳಬೇಕು. ಪಕ್ಷ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ” ಎಂದರು.
ನಾಯಕತ್ವ ಬದಲಾವಣೆ ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರುತ್ತಿಲ್ಲವೇ ಎಂಬ ಪ್ರಶ್ನೆಗೆ, “ನನಗೆ ಆಡಳಿತ ಅನುಭವ ಇಲ್ಲ. ಸಂಸದನಾಗಿರುವುದು ಬೇರೆ, ಆಡಳಿತ ನಡೆಸುವುದು ಬೇರೆ” ಎಂದರು.
ಕಾರ್ಯಕರ್ತರು ಸರ್ಕಾರದ ಆಡಳಿತದಿಂದ ತೃಪ್ತರಿದ್ದಾರೆಯೇ ಎಂದಾಗ, “ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಯಾವ ಸರ್ಕಾರವಿದ್ದರೂ ಕಾರ್ಯಕರ್ತರ ಅಭಿಪ್ರಾಯ ಬೇರೆಯೇ ಇರುತ್ತದೆ. ಅದನ್ನು ಸರಿದೂಗಿಸುವುದು ಪಕ್ಷ ಮತ್ತು ನಾಯಕತ್ವದ ಕೆಲಸ” ಎಂದರು.
ಶ್ರಮಕ್ಕೆ ತಕ್ಕ ಪ್ರತಿಫಲ ಡಿ.ಕೆ.ಶಿವಕುಮಾರ್‌ಗೆ ದೊರೆಯಲಿದೆಯೇ ಎಂಬ ಪ್ರಶ್ನೆಗೆ, “ನನಗೆ ಮಾಹಿತಿ ಇಲ್ಲ. ಶಾಸಕರು ಕೇಳುವುದರಲ್ಲಿ ತಪ್ಪಿಲ್ಲ” ಎಂದರು.
ಸಮುದಾಯವಾರು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಕೂಗಿನ ಬಗ್ಗೆ, “ಎಲ್ಲ ಸಲಹೆಗಳನ್ನು ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನನ್ನ ಪಾತ್ರ ಅಪ್ರಸ್ತುತ” ಎಂದರು.
ಡಿ.ಕೆ.ಶಿವಕುಮಾರ್ ಸಿಎಂ ಆದರೆ ಕಾಂಗ್ರೆಸ್ ಕಚೇರಿಗಳಿಗೆ ಬೀಗ ಹಾಕಬೇಕಾಗುತ್ತದೆ ಎಂಬ ಕೆ.ಎನ್. ರಾಜಣ್ಣ ಹೇಳಿಕೆಗೆ, “ಹಿರಿಯ ನಾಯಕರಾಗಿ ಅವರು ಸಲಹೆ ನೀಡುತ್ತಿದ್ದಾರೆ. ಅದನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತಿದ್ದಾರೆ” ಎಂದರು.
ಆರ್‌ಎಸ್‌ಎಸ್ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು
ಆರ್‌ಎಸ್‌ಎಸ್ ಪಥಸಂಚಲನಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಬಗ್ಗೆ ಕೇಳಿದಾಗ, “ಪಥಸಂಚಲನಕ್ಕೆ ಯಾವ ಕಡಿವಾಣವೂ ಇಲ್ಲ. ದೊಣ್ಣೆ ಹಿಡಿದು ಮಾಡುವ ಪಥಸಂಚಲನಕ್ಕೆ ವಿರೋಧವಿದೆ. ಹಿಂದೆ ಸರಿ ಎನಿಸುತ್ತಿತ್ತು. ಬೇರೆಯವರು ಲಾಠಿ ಹಿಡಿದು ಓಡಾಡಿದರೆ ಅವಕಾಶ ನೀಡುತ್ತೀರಾ? ಅದನ್ನು ಚಿಂತಿಸಬೇಕು. ಮೊದಲು ಚಡ್ಡಿ ಧರಿಸುತ್ತಿದ್ದರು, ಈಗ ಪ್ಯಾಂಟ್ ಧರಿಸುತ್ತಾರೆ. ಬದಲಾವಣೆ ಮಾಡಿಕೊಳ್ಳಬೇಕು. ನಾನು ಹೇಳುವಷ್ಟು ದೊಡ್ಡವನಲ್ಲ, ಆದರೆ ಅವರೇ ಅರಿತುಕೊಂಡರೆ ಒಳ್ಳೆಯದು” ಎಂದರು.
ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿರುವ ಬಗ್ಗೆ, “ತಪ್ಪಿಲ್ಲ. ಸಮಾವೇಶ ಮಾಡುವುದು ತಪ್ಪಲ್ಲ. ಪಕ್ಷ ಸಂಘಟನೆಗೆ ಶಕ್ತಿ” ಎಂದರು.
ಪಕ್ಷದ ಅಡಿಯಲ್ಲಿಯೇ ಕಾರ್ಯಕ್ರಮ ನಡೆಯುತ್ತದೆಯೇ ಎಂದಾಗ, “ಅದು ಅವರವರಿಗೆ ಬಿಟ್ಟಿದ್ದು” ಎಂದರು.
ಗಾಂಧಿ ಭಾರತ ಕಾರ್ಯಕ್ರಮದ ವೇಳೆಯಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟುವ ತೀರ್ಮಾನದ ಬಗ್ಗೆ, “ನಿವೇಶನಗಳಿರುವ ಎಲ್ಲೆಡೆ ಕಚೇರಿ ನಿರ್ಮಾಣಕ್ಕೆ ತಯಾರಿ ನಡೆದಿದೆ. ಹೆಚ್ಚಿನ ಮಾಹಿತಿಯನ್ನು ಪಕ್ಷದ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರು ನೀಡುತ್ತಾರೆ” ಎಂದರು.












