ಬೆಂಗಳೂರು: ಕರ್ನಾಟಕ ರಾಜ್ಯ ಬಜೆಟ್ ಕುರಿತು ಗಂಭೀರ ಚರ್ಚೆ ನಡೆಯಬೇಕಾದ ಸಂದರ್ಭ, ಬಿಜೆಪಿ ನಾಯಕರು “ಹಲಾಲ್ ಬಜೆಟ್” ಎಂಬ ಟೀಕೆಗೆ ಮೊರೆ ಹೋಗಿರುವುದನ್ನು ರಾಜ್ಯ ಸರ್ಕಾರ ತೀಕ್ಷ್ಣವಾಗಿ ಖಂಡಿಸಿದೆ. ಸರ್ಕಾರದ ಪ್ರಕಾರ, ಇದು ಬೌದ್ಧಿಕ ದಿವಾಳಿತನದ ಸ್ಪಷ್ಟ ದೃಷ್ಟಾಂತವಾಗಿದ್ದು, ನಿಜವಾದ ಆರ್ಥಿಕ ವಿಚಾರಗಳನ್ನು ಲಘುವಾಗಿ ತಳ್ಳಿಹಾಕುವ ದುರಭಿಪ್ರಾಯದ ಭಾಗವಾಗಿದೆ.
ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷದ ಪಾತ್ರ ನ್ಯಾಯಸಂಗತ ಟೀಕೆಗಳನ್ನು ನೀಡುವುದು, ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು. ಆದರೆ, ಬಜೆಟ್ ಕುರಿತಂತೆ ತಾತ್ವಿಕ ಚರ್ಚೆ ನಡೆಸುವ ಬದಲಿಗೆ, ಬಿಜೆಪಿ “ಹಲಾಲ್ ಬಜೆಟ್” ಎಂಬ ವಿಭಜನಾ ರಾಜಕೀಯವನ್ನು ಮುಂದುವರಿಸುತ್ತಿದೆ ಎಂದು ಸರ್ಕಾರ ಆರೋಪಿಸಿದೆ.
ಹಿಂದೂಗಳಿಗೆ “ಜಟ್ಕಾ” ಮಾಂಸ, ಮುಸ್ಲಿಮರಿಗೆ “ಹಲಾಲ್” ಮಾಂಸ ಎಂಬ ಗತಕಾಲದ ವಿವಾದವನ್ನು ಹಚ್ಚಿ ರಾಜಕೀಯ ಲಾಭಕ್ಕಾಗಿ ಬಳಸಿದ್ದ ಬಿಜೆಪಿ, ಈಗ ಅದೇ ತಂತ್ರವನ್ನು ಬಜೆಟ್ ಮೇಲೂ ಅಳವಡಿಸಲು ಪ್ರಯತ್ನಿಸುತ್ತಿದೆ. ಆದರೆ, ಈ ರೀತಿಯ ರಾಜಕೀಯವನ್ನು ಜನತೆ ನಿರಾಕರಿಸಿದ್ದು, ಅದರಿಂದಲೇ ಕರ್ನಾಟಕದಲ್ಲಿ ಬಿಜೆಪಿಯ ಸ್ಥಾನ ಕುಸಿದಿದೆ ಎಂಬ ವಾಗ್ದಾಳಿ ಸರ್ಕಾರದಿಂದ ನಡೆಯುತ್ತಿದೆ.
ರಾಜ್ಯ ಸರ್ಕಾರದ ಪ್ರಕಾರ, ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ, ಆರ್ಥಿಕ ಸುಸ್ಥಿರತೆಗೆ ಮತ್ತು ಸಾಮಾಜಿಕ ಉನ್ನತಿಗೆ ಪೂರಕವಾಗಿದೆ. ಇಂತಹ ಸಮಗ್ರ ನೀತಿಯ ಬಗ್ಗೆ ಸಮರ್ಥವಾದ ಚರ್ಚೆ ನಡೆಸುವ ಬದಲು, ಬಿಜೆಪಿಯು ನಿರರ್ಥಕ ಹಾಗೂ ವಿಭಜನಾತ್ಮಕ ಟೀಕೆಗಳಿಗೆ ಮೊರೆ ಹೋಗುವುದನ್ನು ಸರ್ಕಾರ ಖಂಡಿಸಿದೆ.
“ಬಜೆಟ್ ಬಗ್ಗೆ ರಚನಾತ್ಮಕ ಟೀಕೆಗಳನ್ನು ಎದುರಿಸಲು ನಾವು ಸದಾ ಸಿದ್ದ. ಚರ್ಚೆಗೆ ಮುಕ್ತ. ಉತ್ತರಿಸಲು ತಯಾರಿದ್ದೇವೆ. ಆದರೆ, ಬಿಜೆಪಿಗೆ ಅರ್ಥಪೂರ್ಣ ಚರ್ಚೆ ನಡೆಸುವ ಸಾಮರ್ಥ್ಯವಿದೆಯೇ?” ಎಂದು ಸರ್ಕಾರ ಪ್ರಶ್ನಿಸಿದೆ.
ನೈತಿಕ ಹಾಗೂ ಬೌದ್ಧಿಕ ಹೊಣೆಗಾರಿಕೆಯನ್ನು ತ್ಯಜಿಸಿರುವ ವಿರೋಧ ಪಕ್ಷ, ರಾಜ್ಯದ ಜನರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಈ ರೀತಿಯ ನಿರ್ಲಕ್ಷ್ಯ ರಾಜಕೀಯ ವ್ಯವಸ್ಥೆಯ ಸ್ಥಿರತೆಯನ್ನು ಮತ್ತು ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುತ್ತದೆ ಎಂಬುದನ್ನು ಸರ್ಕಾರ ಮುಖ್ಯವಾಗಿ ಒತ್ತಿಹೇಳಿದೆ.