ರಾಮನಗರ: ಹಾವು ಕಡಿತದ ಪ್ರಕರಣಗಳಲ್ಲಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಕಡಿತಕ್ಕೊಳಗಾದವರನ್ನು ರಕ್ಷಿಸುವ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಾವು ಕಡಿತಗಳನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನವರಿಯಿಂದ ಅಕ್ಟೋಬರ್ ವರೆಗೆ 252 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಐವರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದರು.
ಚನ್ನಪಟ್ಟಣ ತಾಲೂಕಿನಲ್ಲಿ 4 ಪ್ರಕರಣಗಳಲ್ಲಿ ಒಬ್ಬರು, ಹಾರೋಹಳ್ಳಿ ತಾಲೂಕಿನಲ್ಲಿ 34 ಪ್ರಕರಣಗಳಲ್ಲಿ ಒಬ್ಬರು, ಕನಕಪುರ ತಾಲೂಕಿನಲ್ಲಿ 50 ಪ್ರಕರಣಗಳಲ್ಲಿ ಒಬ್ಬರು, ಮಾಗಡಿಯಲ್ಲಿ 53 ಪ್ರಕರಣಗಳಲ್ಲಿ ಯಾರೂ ಸಾವಿಗೀಡಾಗಿಲ್ಲ ಹಾಗೂ ರಾಮನಗರ ತಾಲೂಕಿನಲ್ಲಿ 101 ಪ್ರಕರಣಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಹೇಳಿದರು.
ಹಾವು ಕಡಿತದ ವಿಷ ವಿರೋಧಿ ಚುಚ್ಚುಮದ್ದುಗಳು (ಆಂಟಿ ಸ್ನೇಕ್ ವೆನೋಮ್-ಎಎಸ್‌ವಿ) ಚನ್ನಪಟ್ಟಣದಲ್ಲಿ 116, ಹಾರೋಹಳ್ಳಿಯಲ್ಲಿ 55, ಕನಕಪುರದಲ್ಲಿ 110, ಮಾಗಡಿಯಲ್ಲಿ 56 ಹಾಗೂ ರಾಮನಗರದಲ್ಲಿ 223 ಸೇರಿ ಒಟ್ಟು 560 ಲಭ್ಯವಿದೆ ಎಂದ ಅವರು, ಚನ್ನಪಟ್ಟಣದಲ್ಲಿ ಪ್ರಕರಣಗಳು ಕಡಿಮೆ ಇರುವುದರ ಬಗ್ಗೆ ವಿವರಣೆ ಕೇಳಿ, ಪಕ್ಕದ ಮಂಡ್ಯ ಅಥವಾ ರಾಮನಗರ ಆಸ್ಪತ್ರೆಗಳಿಗೆ ರೋಗಿಗಳು ಹೋಗುತ್ತಿರುವುದನ್ನು ಪರಿಶೀಲಿಸಿ ವರದಿ ನೀಡಬೇಕು ಮತ್ತು ಹೆಚ್ಚುವರಿ ಚುಚ್ಚುಮದ್ದುಗಳನ್ನು ಮಾಗಡಿಗೆ ವರ್ಗಾಯಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.
ಹಾವು ಕಡಿತ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿ, ರೈತರು ಹೊಲಗಳಲ್ಲಿ ಮತ್ತು ಕೆರೆ ಬದಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು. ತಾಯಿ-ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗರ್ಭಿಣಿಯರ ಮನೆಗೆ ಭೇಟಿ ನೀಡಿ ತಪಾಸಣೆ ಮಾಡಿಸಬೇಕು. ನವೆಂಬರ್ 15ರಿಂದ 21ರವರೆಗೆ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ-2025 ಆಚರಿಸಲಾಗುತ್ತಿದ್ದು, “ನವಜಾತ ಶಿಶು ಸುರಕ್ಷತೆ-ಪ್ರತಿ ಸ್ಪರ್ಶದಲ್ಲೂ, ಪ್ರತಿ ಸಮಯದಲ್ಲೂ, ಪ್ರತಿ ಶಿಶುವಿಗೂ” ಎಂಬ ಧ್ಯೇಯವಾಕ್ಯವಿದೆ ಎಂದರು.
ಜಿಲ್ಲೆಯಲ್ಲಿ 4092 ಎಚ್‌ಐವಿ ಸೋಂಕಿತರಿದ್ದು, ಪ್ರತಿ ರಕ್ತ ಪರೀಕ್ಷೆಯೊಂದಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತಿದೆ. ಎಚ್‌ಐವಿ ಬಾಧಿತರಿಗೆ ಉದ್ಯೋಗ ಕಲ್ಪಿಸುವ ಚೇತನ ಯೋಜನೆಯಡಿ ಡಿಸೆಂಬರ್ ಅಂತ್ಯದೊಳಗೆ ಫಲಾನುಭವಿಗಳನ್ನು ಗುರುತಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಡಾ. ಮಂಜುನಾಥ್, ಡಾ. ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.











