ಹಾಸನ: ಅಧಿಕಾರಿಗಳಿಗೆ ಕಡ್ಡಾಯ ರಜೆ ನೀಡುತ್ತಿರುವ ಜಿಲ್ಲಾಧಿಕಾರಿ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ತೀವ್ರ ಕೆಂಡಾಕಾರ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಶಾಸಕಾಂಗ ಮತ್ತು ನ್ಯಾಯಾಂಗಕ್ಕೂ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹಾಸನಾಂಬೆ ಜಾತ್ರೋತ್ಸವ ಸಂದರ್ಭದಲ್ಲಿ ಎಡಿಎಲ್‌ಆರ್ ಅಧಿಕಾರಿಯೊಬ್ಬರು ತಮ್ಮೊಂದಿಗೆ ಕಾಣಿಸಿಕೊಂಡಿದ್ದಕ್ಕಾಗಿ ಡಿಸಿ ಅವರಿಗೆ ಕಡ್ಡಾಯ ರಜೆಗೆ ಕಳುಹಿಸಿದ್ದಾರೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಹಾಸನದಲ್ಲಿ ಮಾತನಾಡಿದ ಅವರು, “ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಂದಾಯ ಕಾರ್ಯದರ್ಶಿಗಳು ತರಬೇತಿ ನೀಡಬೇಕಿದೆ. ಡಿಸಿ ದುರಹಂಕಾರದ ಧೋರಣೆ ಬಿಟ್ಟುಬಿಡಬೇಕು. ಇದೇ ಧೋರಣೆ ಮುಂದುವರಿದರೆ ಜನರೇ ತಕ್ಕ ಪಾಠ ಕಲಿಸುವರು” ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ, ಅಬಕಾರಿ ಇಲಾಖೆಯಲ್ಲಿ ಲಂಚಾವತಾರ ತಾರಕಕ್ಕೇರಿದೆ. ಲಂಚ ಇಲ್ಲದೆ ವರ್ಗಾವಣೆ ನಡೆಯುತ್ತಿಲ್ಲ. ಹೆಚ್ಚು ಆದಾಯ ಬರುವ ಇಲಾಖೆಗಳ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಲಾಗುತ್ತಿಲ್ಲ ಎಂದು ರೇವಣ್ಣ ಆರೋಪಿಸಿದರು. ಮಹಾನಗರ ಪಾಲಿಕೆ ಆಯುಕ್ತರಿಗೂ ಡಿಸಿ ಆದೇಶದ ಮೇರೆಗೆ ಕಡ್ಡಾಯ ರಜೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.












