ಬೆಂಗಳೂರು: ಹಿಂದುಳಿದ ವರ್ಗದ ಯುವ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ಪ್ರತ್ಯೇಕ ನಿಧಿ (Fund of Funds) ಸ್ಥಾಪಿಸಬೇಕೆಂದು ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಆಗ್ರಹಿಸಿದ್ದಾರೆ. ಈ ಕುರಿತು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಪತ್ರ ಬರೆದು, ಈ ನಿಧಿಯ ಸ್ಥಾಪನೆಗೆ ಸೂಕ್ತ ನೀತಿ ರೂಪಿಸುವಂತೆ ಕೋರಿದ್ದಾರೆ.
2015ರ ಸಮೀಕ್ಷೆಯ ಪ್ರಕಾರ, ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 70ರಷ್ಟು (ಸುಮಾರು 4.42 ಕೋಟಿ) ಜನರು ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ. ಒಬಿಸಿ ವರ್ಗದ ವ್ಯಾಪ್ತಿಯಲ್ಲಿ 1880 ಜಾತಿ ಮತ್ತು ಉಪಜಾತಿಗಳಿವೆ. ಆದರೆ, ಈ ವರ್ಗದ ಯುವ ಕೈಗಾರಿಕೋದ್ಯಮಿಗಳಿಗೆ ಪ್ರತ್ಯೇಕ ಬಂಡವಾಳ ಅಥವಾ ಅನುದಾನ ವ್ಯವಸ್ಥೆ ಇಲ್ಲದಿರುವುದರಿಂದ, ಅವರು ಕೈಗಾರಿಕಾ ವಲಯದಿಂದ ದೂರ ಉಳಿದಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಸರ್ಕಾರದಿಂದ ಪ್ರತ್ಯೇಕ ನಿಧಿ ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಸಚಿವ ಲಾಡ್ ತಮ್ಮ ಪತ್ರದಲ್ಲಿ ಒತ್ತಿಹೇಳಿದ್ದಾರೆ.
ನಿಧಿಗೆ ಅನುದಾನ ಹೇಗೆ?
ಪ್ರತ್ಯೇಕ ನಿಧಿಗೆ ಸರ್ಕಾರದಿಂದ ಅನುದಾನ ಒದಗಿಸುವುದರ ಜೊತೆಗೆ, ಖಾಸಗಿ ವಲಯದ ಹೂಡಿಕೆದಾರರಿಂದಲೂ ಹೂಡಿಕೆಗೆ ಅವಕಾಶ ಕಲ್ಪಿಸಬಹುದು ಎಂದು ಸಚಿವರು ಸೂಚಿಸಿದ್ದಾರೆ. ಈ ನಿಧಿಯ ಮೂಲಕ ಸರ್ಕಾರ ಮತ್ತು ಖಾಸಗಿ ವಲಯದಿಂದ ಆಯ್ಕೆಯಾದ ಹಿಂದುಳಿದ ವರ್ಗದ ಯುವಕರಿಗೆ ನವೋದ್ಯಮ (ಸ್ಟಾರ್ಟ್‌ಅಪ್) ಸ್ಥಾಪನೆಗೆ ಅನುದಾನ ಒದಗಿಸಬಹುದು. ಇದರಿಂದ ಈ ವರ್ಗದ ಉದ್ಯಮಿಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂಬ ಆಶಾಭಾವನೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿ, ನೀತಿ ರೂಪಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಸಂತೋಷ್ ಲಾಡ್ ಮನವಿ ಮಾಡಿದ್ದಾರೆ.