ಆನೇಕಲ್ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ – ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು: ಕರ್ನಾಟಕ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲ ಅಧಿಕಾರಿಗಳು ದೇವಸ್ಥಾನಗಳಿಗೆ ಸೇರಬೇಕಾದ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಭಾರೀ ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ಮಂದಿರ ಮಹಾಸಂಘವು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದೆ. ಈ ಸಂಬಂಧ, ಆನೇಕಲ್ ತಾಲೂಕಿನ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಈ ಸಂಧರ್ಭದಲ್ಲಿ ಕರ್ನಾಟಕ ಮಂದಿರ ಮಹಾಸಂಘದ ಬೆಂಗಳೂರು ಸಂಯೋಜಕರಾದ ಡಾ. ಬಿ.ಎನ್ ಮಹೇಶ್ ಕುಮಾರ್, ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಅರ್ಚಕ ಆಗಮಿಕ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಶ್ರೀನಿವಾಸ್ ವಿ. ಗುರೂಜಿ, ಚನ್ನಕೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ. ಗೋವಿಂದ ಭಟ್, ಆನೇಕಲ್ ಅರ್ಚಕ ಸಂಘದ ಅಧ್ಯಕ್ಷ ಶ್ರೀ. ಶಿವಣ್ಣ ಆರಾಧ್ಯ, ಶಂಕರ ಮಠದ ಅರ್ಚಕ ಶ್ರೀ. ವೈದ್ಯನಾಥ ದೀಕ್ಷಿತ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯಾ ಗೌಡ, ಶ್ರೀ. ಶಿವಕುಮಾರ್, ಶ್ರೀ. ರಾಜು ರೆಡ್ಡಿ, ಶ್ರೀ. ಸಂಪಂಗಿ ರಾಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಮುಖ ಭ್ರಷ್ಟಾಚಾರ ಪ್ರಕರಣಗಳು:
1. ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಸಾಸಲು ಹೋಬಳಿಯ ರೆವೆನ್ಯೂ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ 2023 ರಿಂದ ಅಧಿಕಾರದಲ್ಲಿದ್ದು, ತಹಶೀಲ್ದಾರ್ ಮತ್ತು ಕೇಸ್ ವರ್ಕನ್ರರ ಸಹಿಯನ್ನು ನಕಲಿ ಮಾಡಿ ಧಾರ್ಮಿಕ ದತ್ತಿ ಇಲಾಖೆಯ ₹60 ಲಕ್ಷ ರೂಪಾಯಿಗಳನ್ನು ತನ್ನ ಹೆಂಡತಿ ಮತ್ತು ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಿದ್ದಾನೆ.
2. ಲಿಂಗಸುಗೂರು, ರಾಯಚೂರು ಜಿಲ್ಲೆ
- ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕ ಯಲ್ಲಪ್ಪ ದೇವಸ್ಥಾನ ಅರ್ಚಕರಿಗೆ ಮೀಸಲಿಟ್ಟ ₹1.87 ಕೋಟಿ ಹಣವನ್ನು ತನ್ನ ಕುಟುಂಬದ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆಯಿಸಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಕರ್ನಾಟಕ ಮಂದಿರ ಮಹಾಸಂಘದ ಬೇಡಿಕೆಗಳು:
- ಭ್ರಷ್ಟಾಚಾರದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ, ಬಂಧಿಸಬೇಕು ಮತ್ತು ಕಠಿಣ ಕಾನೂನು ಕ್ರಮ ಜರುಗಿಸಬೇಕು.
- ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಈ ರೀತಿಯ ಲೂಟಿ ನಡೆದಿದೆಯೇ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ಅನ್ನು ನೇಮಿಸಬೇಕು.
- ಧಾರ್ಮಿಕ ದತ್ತಿ ನಿಧಿಗಳ ದುರ್ಬಳಕೆ ತಡೆಯಲು ಕಠಿಣ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಬೇಕು.
- ದೇವಾಲಯಗಳ ನಿಧಿ ದೇವಾಲಯಗಳ ಅಭಿವೃದ್ಧಿ, ಧರ್ಮಪ್ರಸಾರ, ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಮಾತ್ರ ಬಳಸುವಂತೆ ಕಾನೂನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಕರ್ನಾಟಕ ಮಂದಿರ ಮಹಾಸಂಘವು ಈ ಬಗ್ಗೆ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು, ವಿಳಂಬವಾದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.