ಬೆಂಗಳೂರು: ನೀನಾಸಂ ಕಿಟ್ಟಿ ನಿರ್ದೇಶನ ಮತ್ತು ನಟನೆಯ, ರತ್ನ ಶ್ರೀಧರ್ ನಿರ್ಮಾಣದ “ಹಿಕೋರಾ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿತು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ನೀನಾಸಂ ಕಿಟ್ಟಿ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯ ಈ ಚಿತ್ರದ ಹಾಡುಗಳನ್ನು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್, ಗೀತರಚನೆಕಾರ ಡಾ. ವಿ. ನಾಗೇಂದ್ರಪ್ರಸಾದ್, ನಿರ್ಮಾಪಕರಾದ ನರಸಿಂಹ, ನಾಗೇಶ್ ಕುಮಾರ್, ನಿರ್ದೇಶಕರಾದ ಟಿ.ಎಸ್. ವೆಂಕಟೇಶ್, ಗೋಪಾಲ್ ಹಾಗೂ ನಟ ದೀಪಕ್ ಸೇರಿದಂತೆ ಚಿತ್ರರಂಗದ ಗಣ್ಯರು ಲೋಕಾರ್ಪಣೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು.
ನೀನಾಸಂ ಕಿಟ್ಟಿ ಮಾತನಾಡಿ, “ನಾನು ನೀನಾಸಂನ ವಿದ್ಯಾರ್ಥಿ. ರತ್ನ ಶ್ರೀಧರ್ ದಂಪತಿ ನೀನಾಸಂನಲ್ಲಿ ಮೆಸ್ ನಡೆಸುತ್ತಿದ್ದರು. ಅವರ ಕೈತುತ್ತು ತಿಂದು ಬೆಳೆದವನು ನಾನು. ಕೊರೊನಾದ ಸವಾಲು ಸೇರಿದಂತೆ ಹಲವು ತೊಡಕುಗಳ ನಡುವೆಯೂ ರತ್ನ ಶ್ರೀಧರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ‘ಹಿಕೋರಾ’ ಒಂದು ಆಂಟಿ-ವೈರಸ್ ಚಿತ್ರ. ಯಾವ ವೈರಸ್ ಎಂಬುದನ್ನು ತಿಳಿಯಲು ಚಿತ್ರವನ್ನು ನೋಡಬೇಕು” ಎಂದರು.
ನಿರ್ಮಾಪಕಿ ರತ್ನ ಶ್ರೀಧರ್, “ಚಿತ್ರದ ಮುಹೂರ್ತಕ್ಕೆ ದರ್ಶನ್ ಚಾಲನೆ ನೀಡಿದ್ದರು. ನೀನಾಸಂನ ಸರ್ದಾರ್ ಸತ್ಯ ಒಂದು ರೂಪಾಯಿ ಸಂಭಾವನೆಯಿಲ್ಲದೆ ನಟಿಸಿದ್ದಾರೆ. ಕಿಟ್ಟಿ ಒಳ್ಳೆಯ ಕಥೆಯನ್ನು ರೂಪಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡ ಮತ್ತು ಕುಟುಂಬದವರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಟಿ.ಎಸ್. ವೆಂಕಟೇಶ್ ಮತ್ತು ಸ್ನೇಹಿತರು ಚಿತ್ರವನ್ನು ವಿತರಿಸುತ್ತಿದ್ದಾರೆ” ಎಂದರು.
ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, “ಚಿತ್ರದಲ್ಲಿ ಐದು ವಿಭಿನ್ನ ಶೈಲಿಯ ಹಾಡುಗಳಿವೆ. ಇಂದು ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಹೆಸರಾಂತ ಗಾಯಕ-ಗಾಯಕಿಯರು ಈ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಹಾಡಿಯೋ ಆಡಿಯೋ ಸಂಸ್ಥೆ ಮೂಲಕ ಇವು ಬಿಡುಗಡೆಯಾಗಿವೆ” ಎಂದರು.
ನಾಯಕಿ ಸ್ಪಂದನ ಪ್ರಸಾದ್, “ಈ ಚಿತ್ರದಲ್ಲಿ ನಟಿಸಲು ಪುನೀತ್ ರಾಜಕುಮಾರ್ ಅವರ ಮಾತು ಸ್ಪೂರ್ತಿಯಾಯಿತು” ಎಂದರು. ನಟ ಸರ್ದಾರ್ ಸತ್ಯ, “ರತ್ನಕ್ಕನವರ ಅನ್ನದ ಋಣ ನನ್ನ ಮೇಲಿದೆ. ಅವರು ಕೇಳಿದಾಗ ಒಂದು ರೂಪಾಯಿಯಲ್ಲಿ ಈ ಚಿತ್ರದಲ್ಲಿ ನಟಿಸಿದ್ದೇನೆ” ಎಂದು ತಿಳಿಸಿದರು.
ನಟಿ ಲಾವಂತಿ, ಗಾಯಕ ಪ್ರಸನ್ನ ಕೇಶವ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. “ಹಿಕೋರಾ” ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ.