ಕೇಂದ್ರ ಸರ್ಕಾರದಿಂದ ಹಾನಿ ಮೌಲ್ಯಮಾಪನಕ್ಕೆ ಉನ್ನತ ಮಟ್ಟದ ಕ್ರಮ
ದೆಹಲಿ: ಹಿಮಾಚಲ ಪ್ರದೇಶದಲ್ಲಿ ಕಳೆದ ದಿನಗಳಿಂದ ಸಂಭವಿಸುತ್ತಿರುವ ಮೇಘಸ್ಫೋಟ, ಪ್ರವಾಹ, ಭೂಕುಸಿತ ಮತ್ತು ಇತರ ನೈಸರ್ಗಿಕ ವಿಪತ್ತಿನ ಆವರ್ತನೆ ಮತ್ತು ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಬಹು-ವಲಯ ತಜ್ಞರ ತಂಡವನ್ನು ರಚಿಸಲು ಆದೇಶಿಸಿದ್ದಾರೆ.
ಈ ತಂಡದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA), ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (CBRI) ರೂರ್ಕಿ, ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (IITM) ಪುಣೆ, ಭೂವಿಜ್ಞಾನ ತಜ್ಞರು ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಇಂದೋರ್‌ನ ತಜ್ಞರು ಭಾಗವಹಿಸಲಿದ್ದಾರೆ.
ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ 2025ರ ದಕ್ಷಿಣ-ಪಶ್ಚಿಮ ಮಾನ್ಸೂನ್ ವೇಳೆ ಸಂಭವಿಸಿದ ಪ್ರವಾಹ, ಆಕಸ್ಮಿಕ ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಹಾನಿಯ ಮೌಲ್ಯಮಾಪನೆಗಾಗಿ ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯದ ಮನವಿಗೆ ಕಾಯದೆ, ಅಂತರ್-ಮಂತ್ರಾಲಯಗಳ ಕೇಂದ್ರ ತಂಡವನ್ನು (IMCT) ಜುಲೈ 18ರಿಂದ 21ರವರೆಗೆ ರಾಜ್ಯದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲು ನಿಯೋಜಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕೇಂದ್ರ ಸರ್ಕಾರವು ಯಾವುದೇ ತಾರತಮ್ಯವಿಲ್ಲದೆ ಎಲ್ಲ ರಾಜ್ಯಗಳಿಗೆ ಸಹಕಾರ ನೀಡುತ್ತಿದೆ. 2023ರಲ್ಲಿ ಸಂಭವಿಸಿದ ವಿಪತ್ತುಗಳಿಗೆ ಸ್ಪಂದನೆ ನೀಡುವಂತೆ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಗಳಿಗಾಗಿ ₹2006.40 ಕೋಟಿ ಹಣವನ್ನು ಹಿಮಾಚಲ ಪ್ರದೇಶಕ್ಕೆ ಮಂಜೂರು ಮಾಡಲಾಗಿದ್ದು, ಈ ನಡುವೆ ₹451.44 ಕೋಟಿ ಮೊತ್ತದ ಮೊದಲ ಕಂತು ಜುಲೈ 7, 2025 ರಂದು ಬಿಡುಗಡೆಗೊಂಡಿದೆ.
ಇದೇ ರೀತಿಯಲ್ಲಿ, ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಅಡಿಯಲ್ಲಿ ತಾತ್ಕಾಲಿಕ ರಕ್ಷಣಾ ಕಾರ್ಯಚರಣೆಗಳಿಗೆ ₹198.80 ಕೋಟಿ ಮೊತ್ತದ ಮೊದಲ ಕಂತು ಜೂನ್ 18, 2025ರಂದು ಬಿಡುಗಡೆ ಮಾಡಲಾಗಿದೆ.
ಇದೇ ವೇಳೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ದಳ (NDRF) ನ 13 ತಂಡಗಳು, ಸೇನೆ ಹಾಗೂ ವಾಯುಪಡೆಯ ಸಹಾಯವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಒದಗಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.