ಪಾಟ್ನಾ: ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ, ತತ್ವಜ್ಞಾನಿ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಲ್. ಭೈರಪ್ಪ ಅವರು ಕನ್ನಡ ಮಾತ್ರವಲ್ಲದೇ ಭಾರತೀಯ ಸಾಹಿತ್ಯ ಲೋಕದಲ್ಲಿ ಒಂದು ಶಕ್ತಿಯಾಗಿದ್ದರು. ಅವರ ಕಾದಂಬರಿಗಳು ಬೃಹತ್ ಓದುಗ ವರ್ಗವನ್ನು ಸೃಷ್ಟಿಸಿದ್ದವು. ಅವರ ಕೃತಿಗಳು ಹಿಂದಿ, ಇಂಗ್ಲಿಷ್ ಸೇರಿದಂತೆ ಭಾರತದ ವಿವಿಧ ಭಾಷೆಗಳಿಗೆ ಭಾಷಾಂತರಗೊಂಡು ವ್ಯಾಪಕ ಮನ್ನಣೆ ಗಳಿಸಿದ್ದವು. ಸುಮಾರು ನಾಲ್ಕು ದಶಕಗಳಿಂದ ಅವರು ರಚಿಸಿದ ಕಾದಂಬರಿಗಳು ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿವೆ. ಭೈರಪ್ಪ ಅವರ ಬರವಣಿಗೆಯ ಶೈಲಿ, ಭಾಷೆ ಮತ್ತು ಚಿಂತನೆಗಳು ಸಾಹಿತ್ಯ ಕ್ಷೇತ್ರದಲ್ಲಿ ಯಾವಾಗಲೂ ಚರ್ಚೆಯ ಕೇಂದ್ರಬಿಂದುವಾಗಿದ್ದವು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್, ಪದ್ಮಭೂಷಣ, ಪದ್ಮಶ್ರೀ, ನಾಡೋಜ ಸೇರಿದಂತೆ ಹಲವು ಗೌರವಪೂರ್ಣ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಭೈರಪ್ಪ, 1999ರಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
“ಎಸ್.ಎಲ್. ಭೈರಪ್ಪ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕವು ಒಂದು ಅಪೂರ್ವ ಪ್ರತಿಭೆಯನ್ನು ಕಳೆದುಕೊಂಡಿದೆ. ಅವರ ಕುಟುಂಬ, ಬಂಧು-ಮಿತ್ರರು ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.