ಬೆಂಗಳೂರು: ಹುಬ್ಬಳ್ಳಿಯ ಪೊಲೀಸ್ ಠಾಣೆಯ ಮೇಲಿನ ದಾಳಿ ಪ್ರಕರಣವನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹೈಕೋರ್ಟ್‌ನ ಧಾರವಾಡ ಪೀಠವು ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ತೀರ್ಪು ನೀಡಿದೆ. ರಾಜ್ಯ ಸರ್ಕಾರವು ಕ್ರಿಮಿನಲ್ ಕೇಸ್‌ನ್ನು ವಾಪಸ್ ಪಡೆದಿತ್ತು. ಆದರೆ, ಈ ಕ್ರಮ ಸರಿಯಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ನಾನು ಈ ಹಿಂದೆಯೇ ಹೇಳಿದ್ದೆ, ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ ಪ್ರಕರಣವನ್ನು ವಾಪಸ್ ಪಡೆಯುವುದು ತಪ್ಪು. ಆದರೂ, ರಾಜಕೀಯ ಒತ್ತಡ ಮತ್ತು ಓಲೈಕೆ ರಾಜಕಾರಣಕ್ಕಾಗಿ ಸರ್ಕಾರ ಈ ಕೇಸ್‌ನ್ನು ವಾಪಸ್ ಪಡೆಯಿತು. ನ್ಯಾಯಾಲಯವು ಈ ಕುರಿತು ಸರಿಯಾದ ತೀರ್ಪು ನೀಡಿದೆ. ರಾಜ್ಯ ಸಚಿವ ಸಂಪುಟವು ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು ಓಲೈಕೆ ರಾಜಕಾರಣಕ್ಕೆ ಒಳಗಾಗಬಾರದು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ
ಮಂಗಳೂರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, “ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಜನರಲ್ಲಿ ಪೊಲೀಸರ ಬಗ್ಗೆ ಯಾವುದೇ ಭಯ ಉಳಿದಿಲ್ಲ. ಪೊಲೀಸ್ ಠಾಣೆಗಳು ಭ್ರಷ್ಟಾಚಾರದ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದರಿಂದ ಸಮಾಜ ವಿರೋಧಿ ಶಕ್ತಿಗಳು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿವೆ. ಸರ್ಕಾರದ ಓಲೈಕೆ ರಾಜಕಾರಣದಿಂದ ಜನರು ಸರ್ಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ” ಎಂದು ಆರೋಪಿಸಿದರು.
ಕಮಲ್ ಹಾಸನ್ ಕ್ಷಮೆ ಕೇಳಲಿ
ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಗೆ ಅವಮಾನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕನ್ನಡವು ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಇದರ ಶ್ರೀಮಂತಿಕೆಯನ್ನು ಹಲವು ವಿಧಾನಗಳಲ್ಲಿ ಗುರುತಿಸಲಾಗಿದೆ. ಕಮಲ್ ಹಾಸನ್ ಯಾವುದೇ ಭಾಷೆಯ ಪರಿಣಿತರಲ್ಲ. ಭಾಷೆಯ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು. ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಅವರು ಕನ್ನಡಿಗರಿಗೆ ಕ್ಷಮಾಪಣೆ ಕೇಳಬೇಕು” ಎಂದು ಒತ್ತಾಯಿಸಿದರು.