ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಜನರು ಭಯಪಡಬೇಕಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಹೇಳಿದ್ದಾರೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಭರವಸೆ ನೀಡಿದರು.
ಬೆಂಗಳೂರಿನ ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಹೃದಯಾಘಾತದ ಕುರಿತು ಮಾಧ್ಯಮಗಳಲ್ಲಿ ತೀವ್ರವಾಗಿ ವರದಿಯಾಗುತ್ತಿದ್ದು, ಇದರಿಂದ ಜನರಲ್ಲಿ ಭೀತಿ ಉಂಟಾಗುವುದು ಸಹಜ. ಆದರೆ, ಜನರು ಆತಂಕಗೊಳ್ಳದೆ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಲಹೆಗಳನ್ನು ಪಾಲಿಸಬೇಕು,” ಎಂದು ಕಿವಿಮಾತು ಹೇಳಿದರು.
ಸಾರ್ವಜನಿಕರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಚಿವರು ಸೂಚಿಸಿದರು. “ನಿಯಮಿತವಾಗಿ ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ, ಯೋಗ ಮತ್ತು ಒಳ್ಳೆಯ ಆರೋಗ್ಯ ರಕ್ಷಣೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಜಂಕ್ ಫುಡ್, ಕರಿದ ಆಹಾರ ಮತ್ತು ದುರಭ್ಯಾಸಗಳನ್ನು ತಪ್ಪಿಸಿ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ,” ಎಂದು ಅವರು ಒತ್ತಿ ಹೇಳಿದರು.
“ಜನರು ಎಚ್ಚರಿಕೆಯಿಂದಿರಿ, ಸುರಕ್ಷಿತರಾಗಿರಿ ಮತ್ತು ಆತಂಕದಿಂದ ದೂರವಿರಿ,” ಎಂದು ಡಾ. ಶರಣಪ್ರಕಾಶ್ ಪಾಟೀಲ್ ಸಲಹೆ ನೀಡಿದರು.