‘ಕಸದ ಮೇಲೆಯೂ ಸೆಸ್ ವಿಧಿಸುವ ಮಟ್ಟಿಗೆ ಜನವಿರೋಧಿ ನೀತಿ’ ಎಂದು ಆರೋಪ
ಬೆಂಗಳೂರು/ನವದೆಹಲಿ: ರಾಜ್ಯದಲ್ಲಿ ಜನರ ಮೇಲೆ ಅನಿಯಮಿತ ಬಾಧೆ ತರುವ ರೀತಿಯಲ್ಲಿ ದರ ಏರಿಕೆ ಮಾಡುತ್ತಿರುವುದು ಜನರ “ರಕ್ತ ಹೀರುವ” ಕ್ರಮವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಅವರು, “ಇಂದಿನಿಂದ ಕಸದ ಮೇಲೆಯೂ ಸೆಸ್ ವಿಧಿಸುತ್ತಿರುವ ಕಾಂಗ್ರೆಸ್ ಕಂಪನಿ ಸರಕಾರ, ದರಬೀಜಾಸುರದಂತೆ ವರ್ತಿಸುತ್ತಿದೆ. ಇದು ಬಡಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ” ಎಂದು ಕಿಡಿಕಾರಿದ್ದಾರೆ.
ಅವರು ಹೇಳುವಂತೆ, “ರಾಜ್ಯ ಸರಕಾರ ದಿನಕ್ಕೊಂದು ಸುಳ್ಳು ಹೇಳುತ್ತಿದೆ, ತಿಂಗಳಿಗೊಂದು ದರ ಏರಿಕೆ ಮಾಡುತ್ತಿದೆ. ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರಕಾರದ ಆಡಳಿತ ಶೈಲಿಗೆ ಹೋಲುತ್ತದೆ. ಜನರ ಲೂಟಿ ಮಾತ್ರ ಇವರ ಧ್ಯೇಯವಾಗಿದೆ,” ಎಂದು ಆರೋಪಿಸಿದರು.
ಘಜ್ನಿ-ಘೋರಿ ಉಲ್ಲೇಖ: ದಂಡಯಾತ್ರೆ ಹೋಲಿಕೆ
ಮಹಮ್ಮದ್ ಘಜ್ನಿ ಮತ್ತು ಘೋರಿ ಅವರು ಭಾರತದಲ್ಲಿ ನಡೆಸಿದ ಆಕ್ರಮಣಗಳಂತೆ, ರಾಜ್ಯ ಕಾಂಗ್ರೆಸ್ ಸರಕಾರ ಕನ್ನಡಿಗರ ಮೇಲೂ ದರ ಏರಿಕೆ ದಂಡಯಾತ್ರೆ ನಡೆಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಅವರು, “ಅವರಿಬ್ಬರೂ ನಾಚುವಂತೆ ಇಂದಿನ ಸರಕಾರ ಜನರ ಮೇಲೆ ತೆರಿಗೆ ಬಾಧೆ ಹೇರುತ್ತಿದೆ,” ಎಂದರು.
ವಿವಿಧ ಕ್ಷೇತ್ರಗಳಲ್ಲಿ ದರ ಏರಿಕೆ:
ಕುಮಾರಸ್ವಾಮಿ ಅವರು ಉಲ್ಲೇಖಿಸಿದಂತೆ, ಇತ್ತೀಚಿನ ದಿನಗಳಲ್ಲಿ ಸರ್ಕಾರ ನೀರು, ಮೆಟ್ರೋ ರೈಲು, KSRTC ಬಸ್, ಹಾಲು (ಮೂರು ಬಾರಿ), ವಿದ್ಯುತ್, ಮುದ್ರಾಂಕ, ಮಾರ್ಗದರ್ಶಿ ಮೌಲ್ಯ, ಅಬ್ಕಾರಿ ಸುಂಕ, ಸರ್ಕಾರಿ ಆಸ್ಪತ್ರೆಗಳ ಹೊರ ರೋಗ ವಿಭಾಗ, ಮರಣೋತ್ತರ ಪರೀಕ್ಷೆ, ವೈದ್ಯಕೀಯ ಪ್ರಮಾಣ ಪತ್ರ, ಲ್ಯಾಬ್ ಪರೀಕ್ಷೆಗಳು, ವೃತ್ತಿಪರ ತೆರಿಗೆ ಮತ್ತು ಬಿತ್ತನೆ ಬೀಜಗಳ ದರಗಳನ್ನು ಏರಿಸಿದೆ.
ಇದರ ಜೊತೆಗೆ ಏಪ್ರಿಲ್ 1ರಿಂದ “ಕಸದ ಸೆಸ್” ವಿಧಿಸಿರುವುದು ಜನರ ನಿರಾಸೆಗೆ ಕಾರಣವಾಗಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಕಂಪನಿ ಸರಕಾರಕ್ಕೆ ಖಡಕ್ ಟೀಕೆ:
ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸುತ್ತಾ, ಕುಮಾರಸ್ವಾಮಿ ಅವರು “ಕಾಂಗ್ರೆಸ್ ಕಂಪನಿ ಸರಕಾರ” ಎಂಬ ತೀಕ್ಷ್ಣ ಟೀಕೆಗಳನ್ನು ವ್ಯಕ್ತಪಡಿಸಿದರು. “ಇದು ಸಮೃದ್ಧ ಕರ್ನಾಟಕವನ್ನು ಬರ್ಬಾದಗೊಳಿಸುತ್ತಿರುವ ದುಶಾಸನ ಸರ್ಕಾರ” ಎಂದು ಘೋಷಿಸಿದರು.