ಜೆಡಿಎಸ್ ಕುಟುಂಬದ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ; ಮೋದಿಗೆ ಎದುರು ನಿಲ್ಲುವ ನಾಯಕ ದೇಶದಲ್ಲಿ ಯಾರೂ ಇಲ್ಲ
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಖಾರವಾಗಿ ಖಂಡಿಸಿದ್ದಾರೆ. ಇಂತಹ ಅಪಪ್ರಚಾರದಿಂದ ಯಾರೂ ಗೆದ್ದಿಲ್ಲ, ಗೆಲ್ಲುವುದೂ ಇಲ್ಲ ಎಂದು ಅವರು ಗುಡುಗಿದರು.
ಬೆಂಗಳೂರಿನ ಜೆ.ಪಿ. ಭವನದಲ್ಲಿ ಭಾನುವಾರ ನಡೆದ ಜನತಾದಳ (ಜೆಡಿಎಸ್) ಕಾರ್ಯಕ್ರಮದಲ್ಲಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಸಂಘಟನೆಗಾಗಿ ರಾಜ್ಯ ಪ್ರವಾಸ ಮತ್ತು ‘ಮಿಸ್ ಕಾಲ್’ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿಯವರ ಜನಪ್ರಿಯತೆ ಮತ್ತು ವ್ಯಕ್ತಿತ್ವವನ್ನು ಕೆಲವರು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ, ವಿನಾಕಾರಣ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. “ಯಾವ ಆರೋಪವನ್ನೂ ಸಾಬೀತುಪಡಿಸಲು ಅವರಿಂದ ಸಾಧ್ಯವಾಗಿಲ್ಲ. ಕೇವಲ ಆರೋಪ ಮಾಡುವವರು ಸೋಲುತ್ತಲೇ ಇದ್ದಾರೆ,” ಎಂದು ಅವರು ಹೇಳಿದರು.
ಸೋಲು ಎದೆಗುಂದಿಸದು, ಮತ್ತೆ ಎದ್ದೇಳುತ್ತೇವೆ
ಜೆಡಿಎಸ್‌ನ ಭವಿಷ್ಯದ ಬಗ್ಗೆ ಕುಹಕ ಮಾತನಾಡುವವರಿಗೆ ತಿರುಗೇಟು ನೀಡಿದ ದೇವೇಗೌಡರು, “ಸೋಲು ಗೆಲುವಿನ ಬುನಾದಿ. ಒಂದು ಸೋಲಿನಿಂದ ನಾವು ಕುಗ್ಗುವುದಿಲ್ಲ. ನನ್ನ ಕಾಲಿಗೆ ತೊಂದರೆ ಇರಬಹುದು, ಆದರೆ ಬುದ್ಧಿಗೆ ಯಾವುದೇ ತೊಂದರೆ ಇಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿ 32 ಬಹಿರಂಗ ಸಭೆಗಳನ್ನು ಮಾಡಿದ್ದೇನೆ. ಜನರು ಯಾಕೆ ನಮ್ಮನ್ನು ಕೈಬಿಟ್ಟರು ಎಂದು ಚರ್ಚಿಸುವ ಬದಲು, ಮತ್ತೆ ಎದ್ದೇಳುವ ಶಕ್ತಿ ನಮ್ಮ ಪಕ್ಷಕ್ಕಿದೆ,” ಎಂದು ವಿಶ್ವಾಸದಿಂದ ನುಡಿದರು.
ಜೆಡಿಎಸ್ ಕುಟುಂಬದ ಪಕ್ಷವಲ್ಲ
“ಜೆಡಿಎಸ್ ಕುಟುಂಬದ ಪಕ್ಷ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಕಾರ್ಯಕರ್ತರ ಪಕ್ಷ. ಎಷ್ಟೋ ಮಹಾನುಭಾವರು ಈ ಪಕ್ಷದಲ್ಲಿ ಅಧಿಕಾರ ಅನುಭವಿಸಿದ್ದಾರೆ, ಕೆಲವರು ಬಿಟ್ಟು ಹೋಗಿದ್ದಾರೆ. ಆದರೆ, ಪಕ್ಷ ಸದೃಢವಾಗಿ ಉಳಿದಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಇನ್ನೂ ಬದುಕಿದೆ. ಈ ಪಕ್ಷವನ್ನು ಯಾರೂ ಮುಗಿಸಲು ಸಾಧ್ಯವಿಲ್ಲ,” ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಿದರು. ಜೆ.ಪಿ. ಭವನ ಕಚೇರಿಯನ್ನು ಒಬ್ಬ ಕುರುಬರ ಮಹಿಳೆಯ ದಾನದಿಂದ ಪಡೆದಿದ್ದೇವೆ ಎಂದು ಸ್ಮರಿಸಿದ ಅವರು, “ನಮ್ಮನ್ನು ಟೀಕಿಸುವವರಿಗೆ ಈ ನೈತಿಕತೆ ಇದೆಯೇ?” ಎಂದು ಪ್ರಶ್ನಿಸಿದರು.
ಮೋದಿಗೆ ಎದುರು ಯಾರೂ ಇಲ್ಲ
“ಬಿಜೆಪಿ ಮತ್ತು ಕಾಂಗ್ರೆಸ್ ಬಿಟ್ಟರೆ ಉಳಿದವು ಪ್ರಾದೇಶಿಕ ಪಕ್ಷಗಳು. ಮೋದಿ ದೊಡ್ಡ ನಾಯಕರು, ವಿಶ್ವನಾಯಕರಾಗಿ ಬೆಳೆದಿದ್ದಾರೆ. ಅವರಿಗೆ ಎದುರು ನಿಲ್ಲುವ ನಾಯಕ ದೇಶದಲ್ಲಿ ಯಾರೂ ಇಲ್ಲ. ಈ ಕಾರಣಕ್ಕಾಗಿ ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ,” ಎಂದು ದೇವೇಗೌಡರು ಹೇಳಿದರು. ಕುಮಾರಸ್ವಾಮಿಯನ್ನು ಪ್ರಧಾನಿ ಮೋದಿ ಸಂಪುಟಕ್ಕೆ ಸೇರಿಸಿಕೊಂಡು ಉತ್ತಮ ಖಾತೆಗಳನ್ನು ನೀಡಿದ್ದಾರೆ. ವೈಜಾಗ್ ಉಕ್ಕು ಕಾರ್ಖಾನೆಯನ್ನು ಕುಮಾರಸ್ವಾಮಿ ಪುನಶ್ಚೇತನಗೊಳಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಸಹಕಾರ ಕೊರತೆಯಿಂದ ಎಚ್‌ಎಂಟಿ, ಕುದುರೆಮುಖ, ಭದ್ರಾವತಿ ಕಾರ್ಖಾನೆಗಳನ್ನು ಉಳಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರಕಾರ ಸಹಕಾರ ನೀಡಿದರೆ ಈ ಕಾರ್ಖಾನೆಗಳು ಪುನರ್ಜನ್ಮ ಪಡೆಯಬಹುದು ಎಂದು ಅವರು ಒತ್ತಿ ಹೇಳಿದರು.
ಪಕ್ಷ ಸಂಘಟನೆಗೆ ನಿಖಿಲ್ ಶ್ರಮ
ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆಗಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ ದೇವೇಗೌಡರು, “ಬಿಬಿಎಂಪಿ ಚುನಾವಣೆಯಲ್ಲಿ 50 ಸ್ಥಾನಗಳನ್ನು ಗೆಲ್ಲುವ ಗುರಿ ಇದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಬೇಕು,” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.