2025-26ರ ಕೇಂದ್ರ ಬಜೆಟ್ ದೇಶದ ತೆರಿಗೆ ಪಾವತಿದಾರರಿಗೆ ಮಹತ್ವದ ರಿಯಾಯಿತಿಗಳನ್ನು ನೀಡಿದ್ದು, ವಿಶೇಷವಾಗಿ ಮಧ್ಯಮ ವರ್ಗದವರಿಗೆ ನಿರೀಕ್ಷಿತ ಪರಿಹಾರವನ್ನು ಒದಗಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ 12 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ. 12.75 ಲಕ್ಷ ರೂಪಾಯಿವರೆಗೆ ವೇತನ ಪಡೆಯುವವರಿಗೆ ರೂ. 75,000 ಪ್ರಮಾಣಿತ ಕಡಿತ ನೀಡಲಾಗುವುದು.
ಹೊಸ ತೆರಿಗೆ ಸ್ಲ್ಯಾಬ್‌ಗಳು ಮತ್ತು ದರಗಳು
- 0-4 ಲಕ್ಷ ರೂಪಾಯಿ – ತೆರಿಗೆ ಇಲ್ಲ
- 4-8 ಲಕ್ಷ ರೂಪಾಯಿ – ಶೇ 5%
- 8-12 ಲಕ್ಷ ರೂಪಾಯಿ – ಶೇ 10%
- 12-16 ಲಕ್ಷ ರೂಪಾಯಿ – ಶೇ 15%
- 16-20 ಲಕ್ಷ ರೂಪಾಯಿ – ಶೇ 20%
- 20-24 ಲಕ್ಷ ರೂಪಾಯಿ – ಶೇ 25%
- 24 ಲಕ್ಷ ರೂಪಾಯಿಗೂ ಮೇಲ್ಪಟ್ಟು – ಶೇ 30%
ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲ
ಹೊಸ ತೆರಿಗೆ ವ್ಯವಸ್ಥೆಯಿಂದ ತೆರಿಗೆ ಪಾವತಿದಾರರ ಕೈಯಲ್ಲಿ ಹೆಚ್ಚಿನ ಹಣ ಉಳಿಯಲಿದ್ದು, ಇದರಿಂದ ಗೃಹ ಬಳಕೆ ವೆಚ್ಚ ಮತ್ತು ಹೂಡಿಕೆಗಳು ಹೆಚ್ಚಾಗಲಿವೆ. ಬಂಡವಾಳ ಲಾಭದಂತಹ ಆದಾಯ ಹೊರತುಪಡಿಸಿ, ತಿಂಗಳಿಗೆ ಸರಾಸರಿ 1 ಲಕ್ಷ ರೂಪಾಯಿ ಆದಾಯ ಹೊಂದಿರುವ ವ್ಯಕ್ತಿಗಳಿಗೆ ತೆರಿಗೆ ಭಾರವಿಲ್ಲ ಎಂದು ಹಣಕಾಸು ಸಚಿವೆ ಹೇಳಿದರು.
“ಈ ಹೊಸ ಯೋಜನೆಯು ತೆರಿಗೆಗಳನ್ನು ಕಡಿಮೆ ಮಾಡುವುದರ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಸಹಾಯ ಮಾಡುತ್ತದೆ. ತೆರಿಗೆ ವಿನಾಯಿತಿ ಸುಧಾರಣೆಗಳಿಂದ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದ್ದು, ಉಳಿತಾಯ ಮತ್ತು ಹೂಡಿಕೆಯಲ್ಲಿ ವೃದ್ಧಿ ಕಂಡುಬರುತ್ತದೆ,” ಎಂದು ಶ್ರೀಮತಿ ಸೀತಾರಾಮನ್ ತಿಳಿಸಿದರು.
ಸುಧಾರಿತ ತೆರಿಗೆ ವ್ಯವಸ್ಥೆಯ ಪ್ರಯೋಜನಗಳು
ನೂತನ ತೆರಿಗೆ ವ್ಯವಸ್ಥೆಯು ತೆರಿಗೆ ನಿರ್ವಹಣೆಯನ್ನು ಸರಳಗೊಳಿಸುವುದರೊಂದಿಗೆ, ನಿಖರತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ತೆರಿಗೆ ಪಾವತಿ ಸಂಬಂಧಿತ ದೋಷಗಳು ಕಡಿಮೆಯಾಗಲಿದ್ದು, ದೇಶದ ಆರ್ಥಿಕತೆಗೆ ಗಟ್ಟಿ ಪಾಯಿದಾನ ಒದಗಿಸಲಿವೆ.
ಹಣಕಾಸು ಸಚಿವೆ ತಮ್ಮ ಭಾಷಣದಲ್ಲಿ ತಿರುಕ್ಕುರಲ್‌ನ 542ನೇ ಶ್ಲೋಕವನ್ನು ಉಲ್ಲೇಖಿಸಿ, “ಜೀವರಾಶಿಗಳು ಮಳೆಯನ್ನು ನಿರೀಕ್ಷಿಸಿ ಬದುಕುವಂತೆಯೇ, ನಾಗರಿಕರು ಉತ್ತಮ ಆಡಳಿತವನ್ನು ನಿರೀಕ್ಷಿಸುತ್ತಾರೆ” ಎಂದು ತಿಳಿಸಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ, ಸರ್ಕಾರವು ತೆರಿಗೆ ಪಾವತಿದಾರರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದು, ಹೊಸ ತೆರಿಗೆ ಮಸೂದೆ ಸಾಮಾನ್ಯ ನಾಗರಿಕರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ನೂತನ ತೆರಿಗೆ ಸುಧಾರಣೆಗಳು ದೇಶದ ಆರ್ಥಿಕತೆಗೆ ಒಳ್ಳೆಯ ಮುನ್ನೋಟ ನೀಡಲಿದ್ದು, ನಾಗರಿಕರ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿರಿಸಿಕೊಂಡು ರೂಪಿಸಲಾಗಿದೆ.