ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರ ಬೆಂಗಳೂರಿನಲ್ಲಿ ೨೦೦ ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೆ ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಘೋಷಿಸಿದ್ದಾರೆ.
ಮಂಗಳವಾರ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಗೊಂಡ ಮೂರು ದಿನಗಳ ‘ಬೆಂಗಳೂರು ಟೆಕ್ ಸಮಿಟ್-೨೦೨೫’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, “ಈ ಸೆಮಿಕಂಡಕ್ಟರ್ ಪಾರ್ಕ್ ದೇಶದ ಮಟ್ಟದಲ್ಲಿ ನಾವೀನ್ಯತೆ ಮತ್ತು ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಸ್ಥಾಪನೆಯಾಗುವ ಕಂಪನಿಗಳಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನೂ ಒದಗಿಸಲಾಗುವುದು” ಎಂದು ತಿಳಿಸಿದರು.
ಸಚಿವರು ಮಾತನಾಡಿ, “ಡ್ರೋನ್ ತಂತ್ರಜ್ಞಾನ, ಸೆಮಿಕಂಡಕ್ಟರ್ ಸಾಧನಗಳು, ಸೌರ ಶಕ್ತಿ, ಇಂಡಸ್ಟ್ರಿ ೫.೦ ಸೇರಿದಂತೆ ಮುಂಚೂಣಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದೇಶಿ ಮತ್ತು ದೇಶೀಯ ಆ್ಯಂಕರ್ ಹೂಡಿಕೆದಾರರನ್ನು ಆಕರ್ಷಿಸುವುದು ಸರಕಾರದ ಪ್ರಮುಖ ಗುರಿಯಾಗಿದೆ” ಎಂದರು.
೮೦೦ಕ್ಕೂ ಹೆಚ್ಚು ಆರ್&ಡಿ ಕೇಂದ್ರಗಳು, ೧೮,೩೦೦ ಸ್ಟಾರ್ಟಪ್‌ಗಳು
ಕರ್ನಾಟಕದಲ್ಲಿ ಸದ್ಯ ೮೦೦ಕ್ಕೂ ಹೆಚ್ಚು ಸಂಶೋಧನಾ-ಅಭಿವೃದ್ಧಿ (R&D) ಕೇಂದ್ರಗಳು, ೧೦೦ಕ್ಕೂ ಅಧಿಕ ಚಿಪ್ ಡಿಸೈನ್ ಕಂಪನಿಗಳು ಮತ್ತು ೧೮,೩೦೦ಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿವೆ. ಈ ಕೇಂದ್ರಗಳು ಕೃತಕ ಬುದ್ಧಿಮತ್ತೆ (AI), ಡೀಪ್ ಟೆಕ್, ಕ್ವಾಂಟಂ ಕಂಪ್ಯೂಟಿಂಗ್, ಸ್ಪೇಸ್ ಟೆಕ್ ತಂತ್ರಜ್ಞಾನಗಳಲ್ಲಿ ತೊಡಗಿವೆ ಎಂದು ಸಚಿವರು ಹೇಳಿದರು.
ಉದ್ದೇಶಿತ ‘ಕ್ವಿನ್ ಸಿಟಿ’ ಯೋಜನೆಯ ೫,೦೦೦ ಎಕರೆ ಪ್ರದೇಶದಲ್ಲಿ ಆರ್&ಡಿ ಕೇಂದ್ರಗಳಿಗೆ ಪ್ರತ್ಯೇಕ ಸ್ಥಳವನ್ನು ಮೀಸಲಿಡಲಾಗುವುದು ಮತ್ತು ಅತ್ಯುತ್ತಮ ಕಾರ್ಯಪರಿಸರವನ್ನು ಸೃಷ್ಟಿಸಲಾಗುವುದು ಎಂದು ಅವರು ಭರವಸೆ ನೀಡಿದರು.
೬೦೦ ಕೋಟಿ ರೂ. ವಿಶೇಷ ಅನುದಾನ
ಎಐ, ಮೆಷಿನ್ ಲರ್ನಿಂಗ್, ಕ್ವಾಂಟಂ, ರೋಬೋಟಿಕ್ಸ್, ಸುಸ್ಥಿರ ನಾವೀನ್ಯತೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ತಂತ್ರಜ್ಞಾನ ಕಂಪನಿಗಳ ಬೆಂಬಲಕ್ಕಾಗಿ ಸರಕಾರ ಈಗಾಗಲೇ ೬೦೦ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಪಾಟೀಲ್ ತಿಳಿಸಿದರು.
ಇತ್ತೀಚೆಗೆ ಧಾರವಾಡದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಜೈವಿಕ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ಕೈಗಾರಿಕೆ-ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಸಹಯೋಗ
ಇ.ಎಸ್.ಡಿ.ಎಂ., ಸಂಚಾರ ವ್ಯವಸ್ಥೆ, ಬಯೋಟೆಕ್, ಸ್ಟಾರ್ಟಪ್ ಪರಿಸರ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ಪ್ರಗತಿಪರ ನೀತಿಗಳನ್ನು ರಾಜ್ಯ ಹೊಂದಿದೆ. ಜಪಾನ್, ಅಮೆರಿಕ, ಜರ್ಮನಿ, ಸಿಂಗಪುರ ಸೇರಿದಂತೆ ಹಲವು ದೇಶಗಳೊಂದಿಗೆ ಸಹಕಾರ ಒಪ್ಪಂದಗಳು ಜಾರಿಯಲ್ಲಿವೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಬೆಂಗಳೂರು ಟೆಕ್ ಸಮಿಟ್-೨೦೨೫ ಈ ಮೂರು ದಿನಗಳಲ್ಲಿ ದೇಶ-ವಿದೇಶಗಳ ತಂತ್ರಜ್ಞಾನ ದಿಗ್ಗಜರನ್ನು ಒಗ್ಗೂಡಿಸುವ ಮಹತ್ತ್ವದ ವೇದಿಕೆಯಾಗಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.











