ವಿಜಯನಗರ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ೩.೫ ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ. ಉಳಿದ ಸುಮಾರು ೧ ಲಕ್ಷ ಪಂಪ್‌ಸೆಟ್‌ಗಳನ್ನು ಶೀಘ್ರದಲ್ಲೇ ಸಕ್ರಮ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ೪.೫ ಲಕ್ಷ ಅಕ್ರಮ-ಸಕ್ರಮ ಅರ್ಜಿಗಳು ಬಾಕಿ ಇದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ೩.೫ ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ. ಉಳಿದವುಗಳ ಕಾರ್ಯವೂ ವೇಗವಾಗಿ ನಡೆಯುತ್ತಿದೆ” ಎಂದರು.
ನವೀಕೃತ ಶೀಘ್ರ ಸಂಪರ್ಕ ಯೋಜನೆಯಡಿ ರೈತರು ಸ್ವತಃ ಮೂಲಸೌಕರ್ಯ ಕಲ್ಪಿಸಿಕೊಂಡರೆ ತಕ್ಷಣ ಸಂಪರ್ಕ ನೀಡಲಾಗುವುದು ಎಂದು ಸಚಿವರು ಸಲಹೆ ನೀಡಿದರು.
ಅಕ್ರಮ ಹುಕ್‌ಲೈನ್‌ಗಳಿಂದ ವಿದ್ಯುತ್ ಲೋಡ್ ಹೆಚ್ಚಾಗಿ ಪರಿವರ್ತಕಗಳು ಹಾಳಾಗುತ್ತಿವೆ ಎಂದು ಕಿಡಿಕಾರಿದ ಸಚಿವರು, ಇಂತಹ ಪ್ರಕರಣಗಳಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಿನಗಟ್ಟಲೆ ವಿದ್ಯುತ್ ಸರಬರಾಜು ಒದಗಿಸುವ ನಿಟ್ಟಿನಲ್ಲಿ ಕುಸುಮ್-ಬಿ ಮತ್ತು ಕುಸುಮ್-ಸಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಕುಸುಮ್-ಬಿ ಯೋಜನೆಗೆ ರಾಜ್ಯ ಸರ್ಕಾರ ಶೇ.೫೦ ಸಬ್ಸಿಡಿ ನೀಡುತ್ತಿದೆ. ೧೦ ಎಚ್‌ಪಿ ವರೆಗೆ ಸೋಲಾರ್ ಪಂಪ್‌ಸೆಟ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತವೆ ಎಂದು ಸಚಿವರು ಖಚಿತಪಡಿಸಿದರು.
ತಾಂಡಾ ಮತ್ತು ದೊಡ್ಡಿಗಳಲ್ಲಿ ಅಕ್ರಮ ಸಂಪರ್ಕಗಳು ಹೆಚ್ಚಿರುವುದನ್ನು ಸೂಚಿಸಿದ ಅವರು, ಏಕಾಏಕಿ ಸಂಪರ್ಕ ಕಡಿತಗೊಳಿಸದೆ ಅಧಿಕೃತ ಸಂಪರ್ಕಕ್ಕೆ ಒತ್ತಾಯಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಸಕ್ತ ಸಾಲಿನಲ್ಲಿ ೧೦೦ ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಹಾಳಾದ ಪರಿವರ್ತಕಗಳನ್ನು ಬದಲಾಯಿಸುವಾಗ ಇಲಾಖೆಯ ವಾಹನದಲ್ಲಿಯೇ ಸಾಗಿಸಿ ಅಳವಡಿಸಬೇಕು, ರೈತರು ತಮ್ಮ ವಾಹನದಲ್ಲಿ ತರಬೇಕಾದ ಪರಿಸ್ಥಿತಿ ಬರಬಾರದು ಎಂದು ಸೂಚಿಸಿದರು.
ಸಭೆಯಲ್ಲಿ ಸಂಸದ ಇ. ತುಕಾರಾಮ್, ಶಾಸಕರಾದ ಎಚ್.ಆರ್. ಗವಿಯಪ್ಪ, ಕೆ. ನೇಮಿರಾಜ ನಾಯ್ಕ, ಡಾ. ಎನ್.ಟಿ. ಶ್ರೀನಿವಾಸ್, ಎಲ್. ಕೃಷ್ಣ ನಾಯ್ಕ, ಲತಾ ಮಲ್ಲಿಕಾರ್ಜುನ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ ಪಾಂಡೆ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜೆಸ್ಕಾಂ ಎಂಡಿ ಕೃಷ್ಣ ಬಾಜಪೈ ಮುಂತಾದವರು ಭಾಗವಹಿಸಿದ್ದರು.
ವಿಜಯನಗರ ಜಿಲ್ಲೆಯಲ್ಲಿ ಮೂರು ಹೊಸ ವಿದ್ಯುತ್ ಉಪಕೇಂದ್ರಗಳ ಲೋಕಾರ್ಪಣೆ-ಭೂಮಿಪೂಜೆ
ಹೊಸಪೇಟೆ: ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಮಂಗಳವಾರ ವಿಜಯನಗರ ಜಿಲ್ಲೆಯಲ್ಲಿ ಒಂದು ಹೊಸ ವಿದ್ಯುತ್ ಉಪಕೇಂದ್ರವನ್ನು ಲೋಕಾರ್ಪಣೆಗೊಳಿಸಿ, ಎರಡು ೧೧೦/೧೧ ಕೆವಿ ಉಪಕೇಂದ್ರಗಳಿಗೆ ಭೂಮಿಪೂಜೆ ನೆರವೇರಿಸಿದರು.
ಹೊಸಪೇಟೆ ತಾಲೂಕಿನ ಬೈಲೊದ್ದಿಗೆರೆ ಗ್ರಾಮದಲ್ಲಿ ನವೀಕೃತವಾಗಿ ನಿರ್ಮಿಸಿದ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿದ ಸಚಿವರು, ನಾಗೇನಹಳ್ಳಿ ಬಳಿ ₹೨೨.೮೬ ಕೋಟಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಬಳಿ ₹೨೭.೬೫ ಕೋಟಿ ವೆಚ್ಚದ ಎರಡು ೧೧೦/೧೧ ಕೆವಿ ಉಪಕೇಂದ್ರಗಳ ಭೂಮಿಪೂಜೆ ನೆರವೇರಿಸಿದರು. ಇದೇ ರೀತಿ ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದ ಬೆಳಗಟ್ಟ ಬಳಿ ₹೨೨.೪೭ ಕೋಟಿ ವೆಚ್ಚದ ೬೬/೧೧ ಕೆವಿ ಉಪಕೇಂದ್ರಕ್ಕೂ ಚಾಲನೆ ನೀಡಿದರು.
ಈ ಕಾಮಗಾರಿಗಳಿಂದ ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜು ಸುಗಮಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.











