ಬೆಂಗಳೂರು: ರಾಜ್ಯದಲ್ಲಿ ₹882 ಕೋಟಿ ವೆಚ್ಚದಲ್ಲಿ ಸೌರಕೋಶ ತಯಾರಿಕಾ ಘಟಕ ಸ್ಥಾಪಿಸುವುದನ್ನು ಜಪಾನಿನ ಹೊಸೊಡಾ ಹೋಲ್ಡಿಂಗ್ಸ್ ಕಂಪನಿ ಖಚಿತಪಡಿಸಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಈ ಯೋಜನೆಯು ತೋಂಗ್ ತರ್ ಎನರ್ಜಿ ಸೊಲುಷನ್ಸ್ (ಟಿಟಿಇಎಸ್) ಸಹಯೋಗದಲ್ಲಿ ಕಾರ್ಯಗತಗೊಳ್ಳಲಿದ್ದು, ಇದರಿಂದ 500 ಜನರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.
ಈ ಯೋಜನೆಗೆ ಆರಂಭದಲ್ಲಿ ₹490 ಕೋಟಿ ಹೂಡಿಕೆಗೆ ಟಿಟಿಇಎಸ್ ನಿರ್ಧರಿಸಿತ್ತು. ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಟಿಟಿಇಎಸ್‌ನೊಂದಿಗಿನ ಪಾಲುದಾರಿಕೆಯಿಂದಾಗಿ ಹೊಸೊಡಾ ಹೋಲ್ಡಿಂಗ್ಸ್ ಹೂಡಿಕೆ ಮೊತ್ತವನ್ನು ₹882 ಕೋಟಿಗೆ ಹೆಚ್ಚಿಸಿದೆ. ಜಪಾನ್‌ಗೆ ಭೇಟಿ ನೀಡಿರುವ ರಾಜ್ಯದ ಉನ್ನತ ಮಟ್ಟದ ನಿಯೋಗದೊಂದಿಗೆ ಸಮಾಲೋಚನೆ ನಡೆಸಿದ ಹೊಸೊಡಾ ಹೋಲ್ಡಿಂಗ್ಸ್‌ನ ಅಧ್ಯಕ್ಷ ನಕಾಮುರಾ ಸ್ಯಾನ್, ಈ ಹೂಡಿಕೆ ಹೆಚ್ಚಳವನ್ನು ಖಚಿತಪಡಿಸಿದ್ದಾರೆ.
“ಹೊಸೊಡಾ ಕಂಪನಿಯ ಹೂಡಿಕೆ ಹೆಚ್ಚಳದ ನಿರ್ಧಾರ ಸ್ವಾಗತಾರ್ಹ. ಇದು ಸೌರಶಕ್ತಿ ಉತ್ಪಾದನೆಗೆ ರಾಜ್ಯ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ಸಮರ್ಥಿಸುತ್ತದೆ,” ಎಂದು ಸಚಿವ ಎಂ. ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.
2027ರಲ್ಲಿ ಇನಾಬತಾ ಕ್ರೀಡಾ ಉತ್ಪನ್ನ ಘಟಕ ಕಾರ್ಯಾರಂಭ:
ಜಪಾನಿನ ಇನಾಬತಾ ಕಂಪನಿಯು ಕರ್ನಾಟಕದಲ್ಲಿ ಕ್ರೀಡಾ ಪರಿಕರ ತಯಾರಿಕಾ ಘಟಕವನ್ನು 2027ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿದೆ. ಈ ಘಟಕಕ್ಕೆ ಅಗತ್ಯವಾದ ಭೂಮಿ ಸ್ವಾಧೀನ ಮತ್ತು ಸಂಬಂಧಿತ ಅನುಮೋದನೆಗಳನ್ನು ತ್ವರಿತವಾಗಿ ಒದಗಿಸುವ ಭರವಸೆಯನ್ನು ರಾಜ್ಯದ ನಿಯೋಗ ನೀಡಿದೆ.
ಟೆತ್ಸುಜಿಕವಾ ಕಂಪನಿಯಿಂದ ತಯಾರಿಕಾ ವಿಸ್ತರಣೆ:
ಲೋಹದ ಉಪಕರಣಗಳನ್ನು ಬಳಸಿ ನಿಖರವಾಗಿ ಕತ್ತರಿಸುವ ತಂತ್ರಜ್ಞಾನದಲ್ಲಿ (ಎನ್‌ಗ್ರೇವಿಂಗ್ ಮತ್ತು ಡೈಕಟಿಂಗ್ ಟೆಕ್ನಾಲಜಿ) ಪರಿಣತಿಯನ್ನು ಹೊಂದಿರುವ ಜಪಾನಿನ ಟೆತ್ಸುಜಿಕವಾ ಕಂಪನಿಯು ಕರ್ನಾಟಕದಲ್ಲಿ ತನ್ನ ತಯಾರಿಕಾ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸಿದೆ ಎಂದು ರಾಜ್ಯದ ನಿಯೋಗದೊಂದಿಗೆ ಮಾಹಿತಿ ಹಂಚಿಕೊಂಡಿದೆ.
ರಾಜ್ಯದ ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ ಸೇರಿದಂತೆ ಇತರರು ಭಾಗವಹಿಸಿದ್ದಾರೆ.