ಬೆಂಗಳೂರು: ಪರಿಶಿಷ್ಟ ಜಾತಿ (ಎಸ್.ಸಿ.) ಸಮುದಾಯದ 101 ಜಾತಿಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವಾಗ ಯಾವುದೇ ಜಾತಿಗೆ ಅನ್ಯಾಯವಾಗದಂತೆ ದೃಢ ನಿರ್ಧಾರ ತೆಗೆದುಕೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, “ರಾಜ್ಯದ ಮುಖ್ಯಮಂತ್ರಿಗಳಾಗಿ ನೀವು ಒಳ ಮೀಸಲಾತಿ ವಿಷಯದಲ್ಲಿ ಎಲ್ಲ ಜಾತಿಗಳಿಗೂ ನ್ಯಾಯ ಒದಗಿಸುವ ನಿರ್ಧಾರ ಕೈಗೊಳ್ಳಬೇಕು. ಎಸ್.ಸಿ. ಸಮುದಾಯದ 101 ಜಾತಿಗಳಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಿ. ನಿಮ್ಮ ತೀರ್ಮಾನದಿಂದ ಭವಿಷ್ಯದಲ್ಲಿ ಎಸ್.ಸಿ. ಸಮುದಾಯ ಅಥವಾ ಇತರ ಜಾತಿಗಳು ಬೀದಿಗಿಳಿದು ಹೋರಾಟಕ್ಕೆ ಮುಂದಾಗದಂತೆ ಜಾಗರೂಕರಾಗಿರಿ,” ಎಂದು ಹೇಳಿದರು.
ಮುಖ್ಯಮಂತ್ರಿಗಳು ಎಲ್ಲ ವಿಷಯಗಳನ್ನು ಸಮಗ್ರವಾಗಿ ವಿಮರ್ಶಿಸಿ, ಸಮರ್ಪಕ ತೀರ್ಮಾನ ಕೈಗೊಳ್ಳಬೇಕು ಎಂದು ವಿಜಯೇಂದ್ರ ವಿನಂತಿಸಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಒಳ ಮೀಸಲಾತಿ ವಿಷಯದ ಗೊಂದಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣಕರ್ತರು. ಈ ಗೊಂದಲಕ್ಕೆ ಇತಿಶ್ರೀ ಹಾಡುವ ಜವಾಬ್ದಾರಿ ಅವರ ಮೇಲಿದೆ. ಎಸ್.ಸಿ. ಸಮುದಾಯವು ಸರಕಾರ ಸರಿಯಾದ ರೀತಿಯಲ್ಲಿ ಈ ವಿಷಯವನ್ನು ನಿಭಾಯಿಸುತ್ತದೆ ಎಂಬ ಆಶಾಭಾವನೆಯಲ್ಲಿದೆ,” ಎಂದರು.
ಕಾಂಗ್ರೆಸ್ ಸರಕಾರದ ವೈಫಲ್ಯದ ಟೀಕೆ
ವಿಜಯೇಂದ್ರ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಳ ಮೀಸಲಾತಿ ವಿಷಯದಲ್ಲಿ ಯಾವುದೇ ದೃಢ ತೀರ್ಮಾನ ಕೈಗೊಳ್ಳಲು ವಿಫಲವಾಗಿದೆ ಎಂದು ಟೀಕಿಸಿದರು. “ಸರಕಾರ ಗೊಂದಲದಲ್ಲಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್.ಸಿ.ಗೆ ಮೀಸಲಾತಿಯನ್ನು ಶೇ.15 ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ ಶೇ.7ಕ್ಕೆ ಏರಿಕೆ ಮಾಡಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಇದನ್ನು ಜಾರಿಗೊಳಿಸಲಾಗಿಲ್ಲ ಎಂದು ಅಪಪ್ರಚಾರ ಮಾಡಿದ್ದರು,” ಎಂದು ಆಕ್ಷೇಪಿಸಿದರು.
“ನಾಗಮೋಹನ್‌ದಾಸ್ ವರದಿಯ ಅಂಶಗಳನ್ನು ಬಿಜೆಪಿ ಸರಕಾರ ಈಗಾಗಲೇ ಜಾರಿಗೊಳಿಸಿತ್ತು. ಇದೀಗ ಕಾಂಗ್ರೆಸ್ ಸರಕಾರವು ಸಚಿವ ಸಂಪುಟದ ವಿಶೇಷ ಸಭೆ ಕರೆದು, ಬಿಜೆಪಿ ಮಾಡಿದ್ದನ್ನೇ ಪುನರಾವರ್ತಿಸಲು ಮುಂದಾಗಿದೆ,” ಎಂದು ವಿಜಯೇಂದ್ರ ವಿಶ್ಲೇಷಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡನೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ. ಧರ್ಮಸ್ಥಳ ಮತ್ತು ಶ್ರೀ ಮಂಜುನಾಥೇಶ್ವರನ ಬಗ್ಗೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಪಪ್ರಚಾರ ನಡೆಯುತ್ತಿದೆ. ರಾಜ್ಯ ಸರಕಾರಕ್ಕೆ ಧರ್ಮಸ್ಥಳದ ಮೇಲೆ ಸ್ವಲ್ಪವಾದರೂ ನಂಬಿಕೆ ಇದ್ದರೆ, ಈ ಷಡ್ಯಂತ್ರದ ಕುರಿತು ತನಿಖೆ ನಡೆಸಬೇಕು,” ಎಂದು ಒತ್ತಾಯಿಸಿದರು.
ಸರಕಾರದ ನಿಷ್ಕ್ರಿಯತೆಗೆ ಪ್ರಶ್ನೆ
ವಿಜಯೇಂದ್ರ ಅವರು, ಧರ್ಮಸ್ಥಳದ ವಿಷಯದಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ತಡೆಗಟ್ಟಲು ರಾಜ್ಯ ಸರಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. “ಹಿಂದೆ ಮೈಸೂರಿನಲ್ಲಿ ಹಿಂದೂ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ 24 ಗಂಟೆಯೊಳಗೆ ಬಂಧಿಸಲಾಗಿತ್ತು. ತುಮಕೂರಿನಲ್ಲಿ ಹಿಂದೂಪರ ಮಹಿಳಾ ಕಾರ್ಯಕರ್ತೆಯನ್ನು ಸಾಮಾಜಿಕ ಜಾಲತಾಣದ ಪೋಸ್ಟ್‌ಗಾಗಿ ಬಂಧಿಸಲಾಗಿತ್ತು. ಆದರೆ ಧರ್ಮಸ್ಥಳದ ವಿಷಯದಲ್ಲಿ ಸರಕಾರ ಯಾಕೆ ಸ್ಪಂದಿಸಿಲ್ಲ? ಅಪಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಎಫ್‌ಐಆರ್ ದಾಖಲಿಸದಿರುವುದು ಯಾಕೆ?” ಎಂದು ಕೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ಮೇಲೆ ನಂಬಿಕೆ ಇದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅಪಪ್ರಚಾರ ನಡೆಯುತ್ತಿರುವಾಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರು ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ವಿಜಯೇಂದ್ರ ಆಗ್ರಹಿಸಿದರು.