ಬೆಂಗಳೂರು, ಮೇ 21, 2025
ಬಿಜೆಪಿ ಆಡಳಿತದ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 1,600 ಕೋಟಿ ರೂ. ಹಣ ಬಿಡುಗಡೆಯಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಆ ಕಾಮಗಾರಿಗಳನ್ನು ರದ್ದುಗೊಳಿಸಿತು. ಈ ಕಾಮಗಾರಿಗಳು ನಡೆದಿದ್ದರೆ ಬೆಂಗಳೂರು ಇಂತಹ ಪ್ರವಾಹದ ಸ್ಥಿತಿಗೆ ತಲುಪುತ್ತಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪ್ರವಾಹ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಬೆಂಗಳೂರು ಮಳೆಯಿಂದ ಮುಳುಗಡೆಯಾಗಿದ್ದು, ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯಿಂದಾಗಿ ಐವರು ಸಾವನ್ನಪ್ಪಿದ್ದಾರೆ. ಆದರೂ ಕಾಂಗ್ರೆಸ್ ಸರ್ಕಾರ ಸಾಧನೆಯ ಸಮಾವೇಶ ನಡೆಸುತ್ತಿದೆ. ಮಾನವೀಯತೆ ಇದ್ದರೆ ಈ ಸಮಾವೇಶವನ್ನು ರದ್ದುಗೊಳಿಸಬೇಕಿತ್ತು. ಕಾಂಗ್ರೆಸ್‌ನ ತಪ್ಪಿನಿಂದಲೇ ಜನರು ಸಾವನ್ನಪ್ಪಿದ್ದಾರೆ. ಇಂತಹ ಸಮಾವೇಶ ನಡೆಸಲು ಸರ್ಕಾರಕ್ಕೆ ಯಾವುದೇ ನೈತಿಕ ಅರ್ಹತೆ ಇಲ್ಲ,” ಎಂದು ಆಕ್ಷೇಪಿಸಿದರು.
ಕಾಂಗ್ರೆಸ್‌ನ ನಿರ್ಲಕ್ಷ್ಯ ಆರೋಪ
ಸಾಯಿ ಬಡಾವಣೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಭರವಸೆ ನೀಡಿದ್ದರೂ, ಯಾವುದೇ ಕೆಲಸವಾಗಿಲ್ಲ ಎಂದು ಆರ್. ಅಶೋಕ ದೂರಿದರು. “ಸಿಲ್ಕ್ ಬೋರ್ಡ್ ಬಳಿ ಕಳೆದ ವರ್ಷವೂ ಪ್ರವಾಹವಾಗಿತ್ತು. ಆದರೆ, ಅಭಿವೃದ್ಧಿಗೆ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ಬಿಜೆಪಿ ಆಡಳಿತದಲ್ಲಿ ರಾಜಕಾಲುವೆ ಮತ್ತು ರಸ್ತೆ ಅಭಿವೃದ್ಧಿಗೆ 1,600 ಕೋಟಿ ರೂ. ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಈ ಯೋಜನೆಗಳನ್ನು ರದ್ದುಗೊಳಿಸಿತು. ಈ ಕಾಮಗಾರಿಗಳು ಮುಂದುವರಿದಿದ್ದರೆ, ಬೆಂಗಳೂರು ಈ ರೀತಿ ಮುಳುಗುತ್ತಿರಲಿಲ್ಲ,” ಎಂದು ಅವರು ಆರೋಪಿಸಿದರು.
ಸರ್ಕಾರದ ಲೂಟಿಯ ಆರೋಪ
“ಬೆಂಗಳೂರಿನ ಅಭಿವೃದ್ಧಿಗೆ ಹಣ ನೀಡದೆ, ಆ ಹಣವನ್ನು ಲೂಟಿಗೆ ಬಳಸಲಾಗಿದೆ. ಎಲ್ಲ ಹಣವನ್ನೂ ಸುರಂಗ ಮಾರ್ಗ ಯೋಜನೆಗೆ ಮೀಸಲಿಟ್ಟಿದ್ದಾರೆ. ಆದರೆ, ಈಗ ಎಲ್ಲ ರಸ್ತೆಗಳೇ ಸುರಂಗವಾಗಿವೆ,” ಎಂದು ಆರ್. ಅಶೋಕ ವ್ಯಂಗ್ಯವಾಡಿದರು.
ಹವಾಮಾನ ಇಲಾಖೆ ಏಪ್ರಿಲ್ 15 ರಂದೇ ಭಾರೀ ಮಳೆಯ ಎಚ್ಚರಿಕೆ ನೀಡಿದ್ದರೂ, ಬಿಬಿಎಂಪಿಯಿಂದ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಟೀಕಿಸಿದರು. “ಪ್ರವಾಹದ ಸ್ಥಳಗಳಲ್ಲಿ ಸೆನ್ಸರ್ ಅಳವಡಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ, ಯಾವ ಕೆಲಸವೂ ಆಗಿಲ್ಲ. ಕಾಂಗ್ರೆಸ್‌ನವರು 14 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಈಗ ಜನರೇ ಕಾಂಗ್ರೆಸ್ ಪಕ್ಷವನ್ನು ಮುಚ್ಚಲು ಗುಂಡಿಗಳನ್ನು ತೆಗೆಯುತ್ತಿದ್ದಾರೆ,” ಎಂದು ಕಿಡಿಕಾರಿದರು.
ಗ್ರೇಟರ್ ಬೆಂಗಳೂರು ಈಗ ವಾಟರ್ ಬೆಂಗಳೂರು
ಬಿಜೆಪಿ ಆಡಳಿತದಲ್ಲಿ ಪ್ರತಿ ವರ್ಷ 7-8 ಸಾವಿರ ಕೋಟಿ ರೂ. ಬೆಂಗಳೂರಿನ ಅಭಿವೃದ್ಧಿಗೆ ನೀಡಲಾಗುತ್ತಿತ್ತು ಎಂದು ಆರ್. ಅಶೋಕ ಹೇಳಿದರು. “ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ನೀಡಿರುವ ಹಣವನ್ನೆಲ್ಲ ಸುರಂಗ ಯೋಜನೆಗೆ ಬಳಸಿದೆ. ಬೆಂಗಳೂರು ಮುಳುಗುತ್ತಿದ್ದರೂ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ. ಗ್ರೇಟರ್ ಬೆಂಗಳೂರು ಈಗ ವಾಟರ್ ಬೆಂಗಳೂರು ಆಗಿದೆ. ಮನೆ ಬಾಗಿಲಿಗೆ ಅವಾಂತರ ಮತ್ತು ಸಾವುಗಳನ್ನು ತಂದಿರುವುದು ಕಾಂಗ್ರೆಸ್ ಸರ್ಕಾರದ ವೈಫಲ್ಯ,” ಎಂದು ಆರೋಪಿಸಿದರು.
ಜನರ ಸಾವಿನ ಬಗ್ಗೆ ಸರ್ಕಾರಕ್ಕೆ ಯಾವುದೇ ಸಾಕ್ಷಿ ಬೇಕಿಲ್ಲ ಎಂದು ಆರ್. ಅಶೋಕ ತಿಳಿಸಿದರು. “ಯುದ್ಧಕ್ಕೆ ಸಾಕ್ಷಿ ಕೇಳುವವರು, ಜನರು ಸಾಯುತ್ತಿರುವುದನ್ನು ಬಂದು ನೋಡಲಿ,” ಎಂದು ಸವಾಲು ಹಾಕಿದರು.