ಬೆಂಗಳೂರು: ರಾಜ್ಯ ಸರ್ಕಾರದ ಜಾತಿ ಗಣತಿ ವಿಷಯದಲ್ಲಿ 165 ಕೋಟಿ ರೂ. ದುರುಪಯೋಗವಾಗಿದ್ದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ತಪ್ಪು ದತ್ತಾಂಶ ನೀಡಿ ಜನರನ್ನು ದಿಕ್ಕುತಪ್ಪಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿಗಳ ಸರಣಿ ವೈಫಲ್ಯಗಳಿಗೆ ಜಾತಿ ಗಣತಿಯೂ ಸೇರಿಕೊಂಡಿದೆ. ಮುಡಾ, ವಾಲ್ಮೀಕಿ, ಅಬಕಾರಿ ಹಗರಣಗಳು, ಕಾಲ್ತುಳಿತ ದುರಂತ ಮತ್ತು ಈಗ ಜಾತಿ ಗಣತಿಯಲ್ಲಿ 165 ಕೋಟಿ ರೂ. ವ್ಯರ್ಥವಾಗಿದೆ. ಇದಕ್ಕೆ ಯಾರು ಹೊಣೆ?” ಎಂದು ಕೇಳಿದರು.
ತಪ್ಪು ದತ್ತಾಂಶ, ವೈಫಲ್ಯದ ಆರೋಪ: ಹಿಂದಿನ ಜಾತಿ ಗಣತಿಯನ್ನು ಕೈಬಿಟ್ಟಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, 165 ಕೋಟಿ ರೂ. ಖರ್ಚಿಗೆ ಯಾರನ್ನು ಜವಾಬ್ದಾರರನ್ನಾಗಿಸಲಾಗುವುದು? ಹೊಸ ಸಮೀಕ್ಷೆಗೆ ಮತ್ತೆ ಖರ್ಚು ಮಾಡಲು ರಾಜ್ಯದ ತೆರಿಗೆದಾರರ ಹಣವನ್ನು “ನೀರಿನಲ್ಲಿ ಹೋಮ” ಮಾಡಲು ಸಿದ್ಧರಾಗಿದ್ದೀರಾ ಎಂದು ಸುನೀಲ್ ಕುಮಾರ್ ಆಕ್ಷೇಪಿಸಿದರು. “ದತ್ತಾಂಶವೇ ಸರಿಯಿಲ್ಲದಿದ್ದರೆ, ಅದರ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಹೇಗೆ ಮಾಡಿದಿರಿ? ಒಂದು ಮನೆಯ ಪಂಚಾಂಗವೇ ತಪ್ಪಾಗಿದ್ದರೆ ಮನೆ ಕಟ್ಟಲು ಸಾಧ್ಯವೇ?” ಎಂದು ಅವರು ಪ್ರಶ್ನಿಸಿದರು.
ಕೇಂದ್ರದ ಜಾತಿ ಗಣತಿಗೆ ಸಹಕಾರ ನೀಡಿ: ಕೇಂದ್ರ ಸರ್ಕಾರವು ಜಾತಿ ಗಣತಿಯನ್ನು ಜನಗಣತಿಯೊಂದಿಗೆ ನಡೆಸುವುದಾಗಿ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪ್ರತ್ಯೇಕ ಜಾತಿ ಗಣತಿಗೆ ಏಕೆ ಹಣ ವ್ಯಯಿಸಬೇಕು? ಕೇಂದ್ರದ ಗಣತಿಗೆ ಸಹಕಾರ ನೀಡಬೇಕು ಎಂದು ಸುನೀಲ್ ಕುಮಾರ್ ಸಲಹೆ ನೀಡಿದರು. “ರಾಜ್ಯ ಸರ್ಕಾರವು ಜನರ ದಿಕ್ಕುತಪ್ಪಿಸುವ ಕೆಲಸವನ್ನು ಬಿಟ್ಟು, ಒಬಿಸಿಗಳ ಹಿತಾಸಕ್ತಿಗಾಗಿ ಕೇಂದ್ರದೊಂದಿಗೆ ಕೈಜೋಡಿಸಬೇಕು,” ಎಂದರು.
90 ದಿನಗಳ ಗಡುವು ಸುಳ್ಳು: ಜಾತಿ ಗಣತಿಗೆ 90 ದಿನಗಳ ಗಡುವು ನೀಡಿರುವುದು ಕೇವಲ ಜನರನ್ನು ಗೊಂದಲಗೊಳಿಸುವ ತಂತ್ರ ಎಂದು ಆರೋಪಿಸಿದ ಸುನೀಲ್ ಕುಮಾರ್, “ಎಸ್ಸಿ ಒಳಮೀಸಲಾತಿ ಸಮೀಕ್ಷೆಯನ್ನೇ ಮೂರು ಬಾರಿ ಮುಂದೂಡಿದ್ದೀರಿ. 7 ಕೋಟಿ ಜನರ ಸಮೀಕ್ಷೆಯನ್ನು 90 ದಿನಗಳಲ್ಲಿ ಹೇಗೆ ಮಾಡುವಿರಿ? ಇದು ಅಧಿಕಾರ ತೊರೆಯಲು ಹಾಕಿಕೊಂಡ ಗಡುವಿನಂತಿದೆ,” ಎಂದು ವ್ಯಂಗ್ಯವಾಡಿದರು.
ಹೈಕಮಾಂಡ್ ಒತ್ತಡಕ್ಕೆ ಮಣಿದ ಸಿಎಂ: ಕಾಂತರಾಜು ಆಯೋಗದ ವರದಿಯನ್ನು 10 ವರ್ಷಗಳಿಂದ ಎಳೆದಾಡಿದ ಸಿದ್ದರಾಮಯ್ಯ, ಹೈಕಮಾಂಡ್ ಒತ್ತಡಕ್ಕೆ ಮಣಿದು ಈಗ ಅದನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಆಕ್ಷೇಪಿಸಿದ ಸುನೀಲ್ ಕುಮಾರ್, “ಇದು ಕರ್ನಾಟಕದ ಜನರಿಗೆ ಮಾಡಿದ ದ್ರೋಹ. 165 ಕೋಟಿ ರೂ. ಖರ್ಚಿಗೆ ಆಯೋಗದ ಅಧ್ಯಕ್ಷರನ್ನೋ ಅಥವಾ ಆಯೋಗ ರಚಿಸಿದ ಸಿಎಂ ಮತ್ತು ಸಂಪುಟವನ್ನೋ ಜವಾಬ್ದಾರರನ್ನಾಗಿಸುವಿರಾ?” ಎಂದು ಕೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಭೈರತಿ ಬಸವರಾಜ್, ಸಂಸದ ಪಿ.ಸಿ. ಮೋಹನ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.