ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿರ್ದೇಶನದಂತೆ, ಸ್ವಾತಂತ್ರ್ಯೋತ್ಸವ ಸಂಭ್ರಮದೊಂದಿಗೆ ‘ಹರ್ ಘರ್ ತಿರಂಗ’ ಅಭಿಯಾನವನ್ನು ರಾಜ್ಯದಾದ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಅಭಿಯಾನದ ಭಾಗವಾಗಿ, ಪ್ರತಿಯೊಬ್ಬ ಭಾರತೀಯನ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಭಕ್ತಿಯನ್ನು ಜಾಗೃತಗೊಳಿಸುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಗುಟ್ಟಹಳ್ಳಿಯ ಮಾರುತಿ ಬಡಾವಣೆಯಲ್ಲಿರುವ ಬಿಜೆಪಿ ಕಾರ್ಯಕರ್ತ ಲಕ್ಕಸ್ವಾಮಿ ಅವರ ಮನೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ವಿಜಯೇಂದ್ರ, “ರಾಜ್ಯದ ಎಲ್ಲ ಜಿಲ್ಲೆಗಳು, ವಿಧಾನಸಭಾ ಕ್ಷೇತ್ರಗಳು ಮತ್ತು ಗ್ರಾಮಗಳಲ್ಲಿ ಕಾರ್ಯಕರ್ತರ ಮನೆಗೆ ಭೇಟಿ ನೀಡಿ, ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದೆ. ‘ಹರ್ ಘರ್ ತಿರಂಗ’ ಅಭಿಯಾನವು ದೇಶಭಕ್ತಿಯ ಸಂದೇಶವನ್ನು ಮನೆ ಮನೆಗೆ ತಲುಪಿಸುತ್ತಿದೆ,” ಎಂದು ವಿವರಿಸಿದರು.

ಧರ್ಮಸ್ಥಳಕ್ಕೆ ಭೇಟಿ: ಆಗಸ್ಟ್ 17ರಂದು ಬಿಜೆಪಿ ಶಾಸಕರು ಮತ್ತು ಹಿರಿಯ ನಾಯಕರ ತಂಡದೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡುವುದಾಗಿ ವಿಜಯೇಂದ್ರ ತಿಳಿಸಿದರು. “ನಾವು ಶ್ರೀ ಮಂಜುನಾಥೇಶ್ವರ ಮತ್ತು ಶ್ರೀ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆಯಲು ತೆರಳುತ್ತಿದ್ದೇವೆ. ಇದು ಬಿಜೆಪಿ ಕಾರ್ಯಕರ್ತರಾಗಿ ಮಾತ್ರವಲ್ಲ, ಶ್ರೀ ಮಂಜುನಾಥೇಶ್ವರನ ಭಕ್ತರಾಗಿಯೂ ನಮ್ಮ ಭೇಟಿಯಾಗಿದೆ,” ಎಂದು ಸ್ಪಷ್ಟಪಡಿಸಿದರು.
ಎಸ್‍ಐಟಿ ತನಿಖೆಗೆ ಒತ್ತಾಯ: ಎಸ್‍ಐಟಿ ತನಿಖೆ ಕುರಿತು ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, “ಎಸ್‍ಐಟಿ ತನಿಖೆ ಶೀಘ್ರವಾಗಿ ಮುಕ್ತಾಯಗೊಳ್ಳಬೇಕು. ಸತ್ಯಾಸತ್ಯತೆಯು ಬಹಿರಂಗವಾಗಬೇಕು ಮತ್ತು ಗೊಂದಲಗಳಿಗೆ ತೆರೆ ಬೀಳಬೇಕು. ಕೆಲವು ಸಮಾಜಘಾತಕ ಶಕ್ತಿಗಳು ಮತ್ತು ಎಸ್.ಡಿ.ಪಿ.ಐ.ನಂತಹ ಗುಂಪುಗಳ ಕುತಂತ್ರದ ಬಗ್ಗೆ ಜನರಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ತನಿಖೆಯನ್ನು ಎಳೆದಾಡಲು ಸಾಧ್ಯವಿಲ್ಲ,” ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ: ‘ಹರ್ ಘರ್ ತಿರಂಗ’ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಮಲ್ಲೇಶ್ವರ ಮಂಡಲ ಅಧ್ಯಕ್ಷ ಕೆ.ಎಸ್. ಕೇಶವ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.