ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 20.5 ಲಕ್ಷ ಜನರಲ್ಲಿ 3.49 ಲಕ್ಷ ನಾಗರಿಕರು ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಅದರಲ್ಲಿ 1.73 ಲಕ್ಷ ಜನರು ದೀರ್ಘಕಾಲದ ಸುಸ್ತಿದಾರರು ಮತ್ತು 1.76 ಲಕ್ಷ ಜನರು ಪ್ರಸ್ತುತ ವರ್ಷದ ಸುಸ್ತಿದಾರರು(2024-25). ಒಟ್ಟಾರೆಯಾಗಿ 3.49 ಲಕ್ಷ ನಾಗರಿಕರಿಂದ ಬಿಬಿಎಂಪಿಗೆ 390 ಕೋಟಿ ರೂ.ಗಳ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಆಸ್ತಿ ತೆರಿಗೆಯನ್ನು ಪಾವತಿಸದವರಿಗೆ ನೋಟಿಸ್‌ಗಳು, ಸಂದೇಶ(SMS)ಗಳು, ಐವಿಆರ್‌ಎಸ್ ಕರೆಗಳು, ವೈಯಕ್ತಿಕ ಕರೆಗಳು, ಮುಟ್ಟುಗೋಲು ನೋಟೀಸ್ ಗಳು ಕಳುಹಿಸಿದರೂ ಸಹ ದೀರ್ಘಕಾಲದ ಸುಸ್ತಿದಾರರನ್ನು ತೆರಿಗೆ ಪಾವತಿಸುವಂತೆ ಮಾಡಲಿಲ್ಲ.
ಒಂದು ಬಾರಿ ಪರಿಹಾರ ಯೋಜನೆ(ಒಟಿಎಸ್) ಅನ್ನು ಸಹ ಪಡೆಯದೇ ಉದ್ದೇಶಪೂರ್ವಕವಾಗಿ ದೀರ್ಘಕಾಲದ ಸುಸ್ತಿದಾರರಾಗಿದ್ದಾರೆ. ಹಲವು ವರ್ಷಗಳಿಂದ ಇವರು ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಇಂತಹ ನಾಗರಿಕರನ್ನು ಬಿಟ್ಟುಕೊಡುವುದು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಸಂಪೂರ್ಣವಾಗಿ ಅನ್ಯಾಯ ಮಾಡಿದಂತಾಗುವುದು.
ಶೇ. 10 ರಷ್ಟು ದೀರ್ಘಕಾಲದ ಸುಸ್ತಿದಾರರ ಪರವಾಗಿ ಮಾತನಾಡುವ ಯಾರಾದರೂ ಶೇ. 90 ರಷ್ಟು ಪ್ರಾಮಾಣಿಕ ತೆರಿಗೆ ಪಾವತಿದಾರರ ವಿರುದ್ಧ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಿಲ್ಲುತ್ತಾರೆ.
ಬಿಬಿಎಂಪಿಯು ಕಾನೂನಾತ್ಮಕವಾಗಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಸ್ಪಷ್ಟ ಹಾಗೂ ದೃಢವಾಗಿ ನಿರ್ಧರಿಸಿದೆ. ಈ ನಿರಂತರ ಮತ್ತು ದೀರ್ಘಕಾಲದ ಸುಸ್ತಿದಾರರ ವಿರುದ್ಧ ಬಿಬಿಎಂಪಿಯ ಈ ಅಭಿಯಾನದಲ್ಲಿ ನೈತಿಕವಾಗಿ ಬೆಂಬಲಿಸಲು ತಮ್ಮಲ್ಲಿ ಕೋರಿದೆ.