ಬೆಂಗಳೂರು: ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಕನ್ನಡ ಚಿತ್ರ “31 DAYS”ನ ಟೀಸರ್ ಮತ್ತು ಬಿಡುಗಡೆ ದಿನಾಂಕವನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಇತ್ತೀಚೆಗೆ ಅನಾವರಣಗೊಳಿಸಿದರು. ಈ ಚಿತ್ರವು ಸೆಪ್ಟೆಂಬರ್ 5, 2025ರಂದು ತೆರೆಗೆ ಬರಲಿದೆ.
‘ಜಾಲಿಡೇಸ್’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರಂಜನ್ ಶೆಟ್ಟಿ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ಅವರ 150ನೇ ಚಿತ್ರವಾಗಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಹಾಡುಗಳು ಜನರ ಮನಸ್ಸಿನಲ್ಲಿ ಕುತೂಹಲ ಮೂಡಿಸಿವೆ.
ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸಂತೋಷ್ ಎಸ್. ಲಾಡ್, “ನಿರಂಜನ್ ಶೆಟ್ಟಿ ನನ್ನ ಬಹುಕಾಲದ ಸ್ನೇಹಿತ. ಇದು ಅವರ 8ನೇ ಚಿತ್ರವಾಗಿದ್ದು, ವಿ. ಮನೋಹರ್ ಅವರ 150ನೇ ಸಂಗೀತ ನಿರ್ದೇಶನದ ಚಿತ್ರ ಎಂಬುದು ಸಂತೋಷದ ವಿಷಯ. ಟೀಸರ್ ಕುತೂಹಲಕಾರಿಯಾಗಿದ್ದು, ಚಿತ್ರವೂ ಉತ್ತಮವಾಗಿ ಮೂಡಿಬಂದಿದೆ ಎಂಬ ಭರವಸೆ ಇದೆ. ಕನ್ನಡಿಗರು ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಎಂದಿಗೂ ಕೈಬಿಡುವುದಿಲ್ಲ, ಇದಕ್ಕೆ ‘ಸು ಫ್ರಮ್ ಸೋ’ ಚಿತ್ರದ ಯಶಸ್ಸೇ ಸಾಕ್ಷಿ. ‘31 DAYS’ ಕೂಡ ಉತ್ತಮ ಕಂಟೆಂಟ್‌ನ ಚಿತ್ರವಾಗಿದೆ. ಕನ್ನಡ ಕಲಾರಸಿಕರು ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ವೀಕ್ಷಿಸಿ ಯಶಸ್ಸಿಗೆ ಕಾರಣರಾಗಬೇಕು. ಚಿತ್ರ ಸೂಪರ್ ಹಿಟ್ ಆಗಲಿ” ಎಂದು ಶುಭ ಹಾರೈಸಿದರು.
Nstar ಬ್ಯಾನರ್ ಅಡಿಯಲ್ಲಿ ನಾಗವೇಣಿ ಎನ್. ಶೆಟ್ಟಿ ನಿರ್ಮಿಸಿರುವ ಈ ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶಿಸಿದ್ದಾರೆ. ನಿರಂಜನ್ ಶೆಟ್ಟಿಯವರ ಜೊತೆಗೆ ಪ್ರಜ್ವಲಿ ಸುವರ್ಣ ನಾಯಕಿಯಾಗಿ ನಟಿಸಿದ್ದಾರೆ. 11 ಹಾಡುಗಳಿರುವ ಈ ಸಂಗೀತಪ್ರಧಾನ ಚಿತ್ರಕ್ಕೆ ವಿ. ಮನೋಹರ್ ಸಂಗೀತ, ವಿನುತ್ ಕೆ. ಛಾಯಾಗ್ರಹಣ, ಧನು ಕುಮಾರ್ ನೃತ್ಯ ನಿರ್ದೇಶನ, ಮತ್ತು ನಿಖಿತ್ ಪೂಜಾರಿ ಸಂಕಲನವಿದೆ.
“31 DAYS” ಚಿತ್ರವು ಈ ಜನರೇಷನ್‌ನ ಸುಂದರವಾದ ಪ್ರೇಮಕಥೆಯಾಗಿದ್ದು, 31 ದಿನಗಳಲ್ಲಿ ನಡೆಯುವ ಹೈ-ವೋಲ್ಟೇಜ್ ಲವ್ ಸ್ಟೋರಿಯನ್ನು ಒಳಗೊಂಡಿದೆ.