ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಶೂನ್ಯ ಸಾಧನೆ ತೋರಿದರೂ, ತಾವು ಚಾಂಪಿಯನ್ ಎಂದು ಘೋಷಿಸಿಕೊಂಡಿರುವುದನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ ತೀವ್ರವಾಗಿ ಟೀಕಿಸಿದರು.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಅಧಿಕಾರಗಳನ್ನು ಕಿತ್ತುಕೊಂಡು, ಅವರ ಬಾಯಿಂದಲೇ ಸುಳ್ಳು ಹೇಳಿಸುವ ಕೆಲಸ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
“ಅಭಿವೃದ್ಧಿಯಿಲ್ಲ, ಜನ ಕಲ್ಯಾಣವಿಲ್ಲ, ಕಾಂಗ್ರೆಸ್ ನಾಯಕರ ಜೇಬು ಮಾತ್ರ ತುಂಬಿದೆ”
“ರಾಜ್ಯದಲ್ಲಿ ಯಾವುದೇ ಪ್ರಮುಖ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ, ಆದರೆ ಕಾಂಗ್ರೆಸ್ ನಾಯಕರು ಮಾತ್ರ ಸಂಪತ್ತು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರ ತಾವು ನಂ.1 ಎಂದು ಸುಳ್ಳು ಸಾರುತ್ತಿದೆ” ಎಂದು ಆರ್. ಅಶೋಕ ವಾಗ್ದಾಳಿ ನಡೆಸಿದರು.
ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಎಂಬ ಸರ್ಕಾರದ ಹೇಳಿಕೆಯನ್ನು ಪ್ರಶ್ನಿಸಿದ ಅವರು, “ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಹೆಚ್ಚಿಸಲಾಗಿದೆ, ಬಾಣಂತಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪುತ್ತಿದ್ದಾರೆ” ಎಂದು ಕಿಡಿಕಾರಿದರು. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ ಎಂಬುದನ್ನೂ ಅವರು ಪ್ರಶ್ನಿಸಿದರು. “ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಲೂಟಿ ಮಾಡಲಾಗಿದೆ, ದಲಿತರಿಗೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು.
ಬೆಂಗಳೂರು ನಗರದ ಪರಿಪಾಠದ ಬಗ್ಗೆ ಮಾತನಾಡುತ್ತ, “ರಸ್ತೆಗಳ ಗುಂಡಿಗಳು ಹೆಚ್ಚಾಗಿವೆ, ಕಸದ ರಾಶಿಗಳು ತುಂಬಿಕೊಂಡಿವೆ, ಇ-ಖಾತಾ ಮಾಡಿಸಿಕೊಳ್ಳಲು ಜನರು ಹಣ ಕೊಡಿ ಎಂದು ಜಾಹೀರಾತು ನೀಡಲಾಗುತ್ತಿದೆ” ಎಂದು ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದರು.

“ನಿಷ್ಕ್ರಿಯ ಆಡಳಿತ, ಕಾನೂನು ಸುವ್ಯವಸ್ಥೆ ಗಂಭೀರ ಸ್ಥಿತಿಗೆ”
ಕಳೆದ 19 ತಿಂಗಳಲ್ಲಿ “ಯಾವುದೇ ಗಂಭೀರ ಕಾನೂನು ಉಲ್ಲಂಘನೆ ನಡೆದಿಲ್ಲ” ಎಂಬ ರಾಜ್ಯಪಾಲರ ಹೇಳಿಕೆಯನ್ನು ಉಲ್ಲೇಖಿಸುತ್ತಾ, “ಅತ್ಯಾಚಾರಗಳು, ಬ್ಯಾಂಕ್ ದರೋಡೆ, ಮೈಸೂರು ಪೊಲೀಸ್ ಠಾಣೆ ಮೇಲೆ ದಾಳಿ” ಮುಂತಾದ ಘಟನೆಗಳು ನಡೆದಿದ್ದರೂ, ಅವು ಸರ್ಕಾರದ ಪ್ರಕಾರ ಗಂಭೀರವಾಗಿಯೇ ಕಾಣಿಸಿಲ್ಲ ಎಂದು ಆರ್. ಅಶೋಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಮೈಕ್ರೋ ಫೈನಾನ್ಸ್‌ನಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿಲ್ಲ, ಕಲಾವಿದರಿಗೆ ಮಾಸಾಶನ ನೀಡಿಲ್ಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿಲ್ಲ. ಆದರೂ ಸರ್ಕಾರವು ಪಾರದರ್ಶಕ ಆಡಳಿತ ನಡೆಸುತ್ತಿದೆ ಎಂದು ಹೇಳಿಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯಪಾಲರ ಭಾಷಣವೇ ಸರ್ಕಾರದ ಶೂನ್ಯತೆಯನ್ನು ಬಯಲಿಗೆಳೆದಿದೆ”
ಸಾಮಾನ್ಯವಾಗಿ ರಾಜ್ಯಪಾಲರ ಭಾಷಣವು ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಮುಂದಿನ ಯೋಜನೆಗಳ ಮುನ್ನೋಟವನ್ನು ಒಳಗೊಂಡಿರುತ್ತದೆ. ಆದರೆ, “ಈ ಸರ್ಕಾರ ಕಳೆದ ಒಂದು ವರ್ಷದಲ್ಲಿ ಏನನ್ನೂ ಮಾಡಿಲ್ಲ, ಮುಂದೇನಾದರೂ ಮಾಡಲು ಯಾವುದೇ ದೃಷ್ಟಿಯೂ ಇಲ್ಲ ಎಂಬುದಕ್ಕೆ ಈ ಭಾಷಣವೇ ಸಾಕ್ಷಿ” ಎಂದು ಆರ್. ಅಶೋಕ ವಾಗ್ದಾಳಿ ನಡೆಸಿದರು.
“ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಲ್ ಜೀವನ ಮಿಷನ್, ಆವಾಸ್ ವಸತಿ, ಸ್ವಾಮಿತ್ವ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಇವು ತನ್ನದೇ ಯೋಜನೆಗಳಂತೆ ಬಿಂಬಿಸಿಕೊಂಡು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ” ಎಂದು ದೂರಿದರು.
“ಜನಕಲ್ಯಾಣ ಹಾಗೂ ಅಭಿವೃದ್ಧಿ ಎಂಬುದರ ನಡುವೆ ಸಮತೋಲನ ಸಾಧಿಸಲು ಸರ್ಕಾರ ವಿಫಲವಾಗಿದೆ. ನಾನು ನನ್ನ ರಾಜಕೀಯ ಜೀವನದಲ್ಲಿ ಇಷ್ಟು ನಿರರ್ಥಕ ರಾಜ್ಯಪಾಲರ ಭಾಷಣ ಕೇಳಿಲ್ಲ. ಏನನ್ನೂ ಮಾಡದ, ಮಾಡಲಾಗದ ಸರ್ಕಾರವೇ ಕರ್ನಾಟಕವನ್ನು ಶೋಷಿಸುತ್ತಿದೆ” ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.