ಬೆಂಗಳೂರು, ಮಾರ್ಚ್ 04 (ಕರ್ನಾಟಕ ವಾರ್ತೆ) :
ಇನ್ವೆಸ್ಟ್ ಕರ್ನಾಟಕ – 2025ರ ಸಮಾವೇಶದಲ್ಲಿ ಒಡಂಬಡಿಕೆ ಮಾಡಿಕೊಂಡಿರುವ ಹಾಗೂ ಅನುಮೋದನೆ ಪಡೆದಿರುವ ಯೋಜನೆಗಳಿಂದ ಅಂದಾಜು 6 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇನ್ವೆಸ್ಟ್ ಕರ್ನಾಟಕ – 2025ರ ಸಮಾವೇಶವನ್ನು ರೂ 90.00 ಕೋಟಿಗಳ ವೆಚ್ಚದಲ್ಲಿ ಆಯೋಜಿಸಲು ಸರ್ಕಾರವು ಅನುಮೋದನೆ ನೀಡಿರುತ್ತದೆ. ಇದರಲ್ಲಿ ಇಲ್ಲಿಯವರೆಗೆ ರೂ 75.00 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ. ಸಮಾವೇಶವು ಇತ್ತಿಚೆಗೆ ಫೆಬ್ರವರಿ 14ರಂದು ಮುಕ್ತಾವಾಗಿದ್ದು, ಸಮಾವೇಶಕ್ಕಾಗಿ ತಗುಲಿದ ವಾಸ್ತವಿಕ ವೆಚ್ಚದ ವಿವರಗಳನ್ನು ಕ್ರೋಢೀಕರಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಒಟ್ಟು 3250 ಉದ್ದಿಮೆದಾರರು ಭಾಗವಹಿಸಿದ್ದು, ವಿವಿಧ ರಾಜ್ಯಗಳಿಂದ 266, ವಿದೇಶಗಳಿಂದ 72, ಕರ್ನಾಟಕ ರಾಜ್ಯದಿಂದ 2892 ಉದ್ದಿಮೆದಾರರು ಭಾಗವಹಿಸಿದ್ದರು. ಒಟ್ಟು 98 ಕಂಪನಿಗಳೊಂದಿಗೆ ಒಡಂಬಡಿಕೆಗಳಾಗಿವೆ. ಅವುಗಳ ಹೂಡಿಕೆಯು ರೂ. 6,23,970 ಕೋಟಿಯಾಗಲಿದೆ. ಅಲ್ಲದೆ, ರೂ. 4,03,533 ಕೋಟಿ ಬಂಡವಾಳ ಹೂಡಿಕೆ ಮಾಡಲು 1101 ಕಂಪನಿಗಳು ಸಂಬಂಧಿಸಿದ ಸಮಿತಿಗಳಿಂದ ಅನುಮೋದನೆ ಪಡೆದಿರುತ್ತಾರೆ ಎಂದು ತಿಳಿಸಿದರು.
ಈ ಹಿಂದೆ ನಡೆದ ಇನ್ವೆಸ್ಟ್ ಕರ್ನಾಟಕ – 2022ರ ಸಮಾವೇಶದಲ್ಲಿ ಉದ್ಯಮ ಪ್ರಾರಂಭಿಸಲು 57 ಕಂಪನಿಗಳೊಂದಿಗೆ ಒಟ್ಟು 5,41,696/- ಕೋಟಿ ಬಂಡವಾಳ ಹೂಡಲು ಒಪ್ಪಂದಗಳಿಗೆ ಸಹಿ ಮಾಡಲಾಗಿತ್ತು. ಸದರಿ 57 ಕಂಪನಿಗಳಲ್ಲಿ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು 20 ಕಂಪನಿಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪ್ರಸ್ತಾವಗಳಿಂದ ಒಟ್ಟು ರೂ. 2,01,167 ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಹಾಗೂ 70,740 ಉದ್ಯೋಗ ಸೃಜನೆಯಾಗಲಿದೆ ಇವುಗಳಲ್ಲಿ 2 ಯೋಜನೆಗಳು ಅನುಷ್ಠಾನಗೊಂಡಿರುತ್ತದೆ. ಮುಂದುವರೆದು ಈ ಸಮಾವೇಶದ ಸಮಯದಲ್ಲಿ 606 ಯೋಜನೆಗಳಿಗೆ ಒಟ್ಟು ರೂ 3,26,015/- ಹೂಡಿಕೆಗೆ ಏಕ ಗವಾಕ್ಷಿ ಸಮಿತಿ ಸಭೆಗಳಲ್ಲಿ ಅನುಮೋದನೆ ನೀಡಲಾಗಿತ್ತು ಎಂದು ತಿಳಿಸಿದರು.
ಎಲೆ ಚುಕ್ಕೆ ರೋಗ ಹಾಗೂ ಹಳದಿ ಎಲೆ ರೋಗಗಳಿಂದ ತೊಂದರೆಗೊಳಗಾದ ರೈತರಿಗೆ ಪರಿಹಾರ ನೀಡಲು ಕ್ರಮ – ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ಬೆಂಗಳೂರು, ಮಾರ್ಚ್ 04 (ಕರ್ನಾಟಕ ವಾರ್ತೆ) :
ಎಲೆ ಚುಕ್ಕೆ ರೋಗ ಹಾಗೂ ಹಳದಿ ರೋಗಗಳಿಂದ ತೊಂದರೆಗೆ ಒಳಗಾದ ರೈತರಿಗೆ ಅದಷ್ಟು ಶೀಘ್ರವಾಗಿ ಪರಿಹಾರ ಧನ ಬಿಡುಗಡೆ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, 2023-24ನೇ ಸಾಲಿನಲ್ಲಿ ರೈತರಿಗೆ ಪ್ರತಿ ಹೆಕ್ಟೇರ್‍ಗೆ ರೂ. 4000/- ಗಳಂತೆ 1.5 ಹೆಕ್ಟೇರ್ ವರೆಗೆ ಪ್ರತಿ ಫಲಾನುಭವಿಗೆ ಗರಿಷ್ಠ ರೂ 6000/- ಮೊತ್ತದ ಸಸ್ಯ ಸಂರಕ್ಷಣಾ ಔಷಧಿಗಳನ್ನು 6250 ಹೆಕ್ಟೇರ್ ಪ್ರದೇಶಕ್ಕೆ ವಿತರಿಸಿ ರೂ. 250.00 ಲಕ್ಷಗಳ ಅನುದಾನವನ್ನು 12,300 ಅಡಿಕೆ ಬೆಳೆಗಾರರಿಗೆ ನೀಡಲಾಗಿರುತ್ತದೆ ಎಂದು ತಿಳಿಸಿದರು.
ಅಡಿಕೆ ಬೆಳೆಗಾರರಿಗೆ ಅಡಿಕೆ ಬೆಳೆಯ ಕಟಾವು ಹಾಗೂ ಸಂಪರಣೆಗಾಗಿ (ದೋಟಿ) ಖರೀದಿಸಲು ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಶೇ. 40 ರಷ್ಟು ಹಾಗೂ ಪರಿಶಿಷ್ಟ ಜಾತಿ / ಪಂಗಡದವರಿಗೆ ಶೇ.50 ರಂತೆ ಸಹಾಯಧನ ನೀಡಲಾಗುತ್ತಿದೆ. 2023-24ನೇ ಸಾಲಿನಲ್ಲಿ 1201 ಫಲಾನುಭವಿಗಳಿಗೆ ರೂ 366.68 ಲಕ್ಷಗಳ ಸಹಾಯಧನ ನೀಡಲಾಗಿದೆ. ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣ ಕುರಿತು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರ ಸಹಯೋಗದೊಂದಿಗೆ ತರಬೇತಿ ಕಾಯಾಗಾರಗಳು ಹಾಗೂ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕಾಗಿ ಹೆಕ್ಸೋಕೊನೋಜೋಲ್, ಟೆಬುಕೊನೊಜೋಲ್, ಪ್ರೋಪಿಕೊನೊಜೋಲ್ ಮತ್ತು ಪ್ರೋಪಿನೇಬ್ ಎಂಬ ಸಸ್ಯ ಸಂರಕ್ಷಣಾ ಔಧಿಗಳನ್ನು ತಜ್ಞರ ಶಿಫಾರಸಿನನ್ವಯ ಹಾನಿಯಾದ ಪ್ರದೇಶದ ರೈತರಿಗೆ ವಿತರಿಸಲಾಗುತ್ತಿದೆ. ಅಡಿಕೆ ಎಲೆ ಚುಕ್ಕೆ ರೋಗ ಹಾಗೂ ಹಳದಿ ಎಲೆ ರೋಗಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿರುವ ವೈಜ್ಞನಿಕ ತಂಡದ ಸಮಿತಿಯು ಫೈಟೋಸ್ಯಾನಿಟರಿ ಕ್ರಮಗಳ ಅಳವಡಿಕೆ, ಪೋಷಕಾಂಶಗಳ ನಿರ್ವಹಣೆ, ಸಸ್ಯ ಸಂರಕ್ಷಣೆ ಔಷಧಿಗಳನ್ನು ತಜ್ಞರ ಶಿಫಾರಸ್ಸಿನನ್ವಯ ಹಾನಿಯಾದ ಪ್ರದೇಶದ ರೈತರಿಗೆ ವಿತರಿಸಲಾಗುತ್ತಿದೆ.
ಅಡಿಕೆ ಎಲೆ ಚುಕ್ಕೆ ರೋಗದಿಂದ ಹಾನಿಯಾಗಿರುವ ಸುಮಾರು 53977 ಹೆಕ್ಟೇರ್ ಪ್ರದೇಶಕ್ಕೆ ರೂ. 225.73 ಕೋಟಿಗಳ ಪ್ರಸ್ತಾವನೆಯನ್ನು ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ 60:40ರ ಅನುಪಾತದಲ್ಲಿದ್ದು, ಈ ಕಾರ್ಯಕ್ರಮವು 2 ವರ್ಷಗಳ ಅವಧಿಯದ್ದಾಗಿರುತ್ತದೆ. 202425ನೇ ಸಾಲಿಗೆ ರೂ. 112.83 ಕೋಟಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದರಲ್ಲಿ ಕೇಂದ್ರ ಪಾಲಿನ ಅನುದಾನ ರೂ. 6771.75 ಲಕ್ಷಗಳಲ್ಲಿ 3700.00 ಲಕ್ಷಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ಪಾಲನ್ನು ಸೇರಿಸಿ ಆದಷ್ಟು ಬೇಗ ಅನುಷ್ಠಾನ ಮಾಡಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಅನಧಿಕೃತ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಇ-ಖಾತಾ ನೀಡಲು ಕ್ರಮ
ಬೆಂಗಳೂರು, ಮಾರ್ಚ್ 04 (ಕರ್ನಾಟಕ ವಾರ್ತೆ) :
ಪ್ರಸ್ತುತ ಅನಧಿಕೃತ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಇ-ಖಾತಾ ನೀಡಲು ಕ್ರಮ ವಹಿಸಲಾಗಿರುತ್ತದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್. ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಮುನಿಸಿಪಲ್ ಕಾಯ್ದೆಗಳ ತಿದ್ದುಪಡಿಯಂತೆ ಕರ್ನಾಟಕ ಪೌರಸಭೆಗಳ (ತೆರಿಗೆ) ನಿಯಮಗಳು 1995 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಶೆಡ್ಯೂಲ್ 3ರ ತೆರಿಗೆ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಅದರಂತೆ ಅನಧಿಕೃತ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಇ-ಖಾತಾ ವಿತರಿಸಲು ಈಗಾಗಲೇ ಕ್ರಮ ವಹಿಸಲಾಗಿರುತ್ತದೆ ಎಂದು ತಿಳಿಸಿದರು.
ಇ-ಆಸ್ತಿ ತಂತ್ರಂಶದಲ್ಲಿ ಖಾತಾ ಸೃಜನೆ ಮಾಡಲು ಅನುಸರಿಸಬೇಕಾದ ಕ್ರಮಗಳು ಮತ್ತು ತೆಗೆದುಕೊಳ್ಳಬೇಕಾದ ದಾಖಲೆಗಳ ಕುರಿತು ವ್ಯವಸ್ಥತಿತ ಕಾರ್ಯಾಚರಣೆ ವಿಧಾನವನ್ನು ಪೌರಾಡಳಿತ ನಿರ್ದೇಶನಾಲಯದಿಂದ 2025ನೇ ಫೆಬ್ರವರಿ 17ರಂದು ಹೊರಡಿಸಲಾಗಿದೆ ಹಾಗೂ 2025ನೇ ಫೆಬ್ರವರಿ 11ರಿಂದ ಅನಧಿಕೃತ ಸ್ವತ್ತುಗಳಿಗೆ ಖಾತ ನೀಡಲು ಇ-ಆಸ್ತಿ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಅನಿಲ ವಿತರಣೆ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ – ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು, ಮಾರ್ಚ್ 04 (ಕರ್ನಾಟಕ ವಾರ್ತೆ) :
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿರುವ 18 ಭೌಗೋಳಿಕ ಪ್ರದೇಶಗಳಲ್ಲಿ ನಗರ ಅನಿಲ ವಿತರಣೆ ಯೋಜನೆಗಳನ್ನು ಅನುಷ್ಠಾನಗೊಳಿಸಲು 8 ನಗರ ಅನಿಲ ವಿತರಣ ಸಂಸ್ಥೆಗಳನ್ನು ಅಧಿಕೃತವಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ನಗರ ಅನಿಲ ವಿತರಣೆ ಸಂಸ್ಥೆಗಳು, ಕೊಳವೆ ನೈಸರ್ಗಿಕ ಅನಿಲ ವಿತರಣೆಯನ್ನು ಗೃಹ ಬಳಕೆ, ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗಗಳಿಗೆ ಪೂರೈಸಲು ನಗರ ಅನಿಲ ವಿತರಣೆ ಜಾಲವನ್ನು ಅಭಿವೃದ್ಧಿಪಡಿಸುವ ಜವಬ್ದಾರಿಯನ್ನು ಹೊಂದಿದೆ. ಸಿ.ಎನ್.ಜಿ. ಸ್ಟೇಷನ್‍ಗಳ ಮೂಲಕ ವಾಹನಗಳಿಗೆ ಇಂಧನವಾಗಿ ಪೂರೈಸಲಾಗುತ್ತಿದೆ.
ಭಾರತ ಸರ್ಕಾರವು ಸಿ.ಜಿ.ಡಿ ಯೋಜನೆಗಳನ್ನು ಸಾರ್ವಜನಿಕ ಉಪಯುಕ್ತ ಯೋಜನೆಗಳೆಂದು ಪರಿಗಣಿಸಿದೆ. ಈ ಯೋಜನೆಗಳು ಗೃಹ ಬಳಕೆಗಾಗಿ ಹಾಗೂ ವಾಹನ ಇಂಧನವಾಗಿ ಶುದ್ಧ ಮತ್ತು ಹಸಿರು ಇಂಧನ ತರುವುದಲ್ಲದೆ ಇದು ರಾಜ್ಯದ ಸುಸ್ಥಿರ ಕೈಗಾರಿಕೆ ಬೆಳವಣಿಗೆಗೆ ಒಂದು ಸಾಧನವಾಗಿದೆ.
ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಂತ್ರಾಲಯದ ಕಾರ್ಯದರ್ಶಿಯವರ ಪ್ರಾಮಾಣೀಕರಣ ಸೇರಿದಂತೆ ಸಿಜಿಡಿ ವಲಯದ ತ್ವರಿತ ಅಭಿವೃದ್ಧಿಗಾಗಿ ಏಕರೂಪದ ಚೌಕಟ್ಟನ್ನು ರಚಿಸಲು ಅನುಕೂಲವಾಗುವಂತೆ ಸಿಜಿಡಿ ನೀತಿಯನ್ನು ರಚಿಸಲು ವಿನಂತಿಸಿರುತ್ತಾರೆ. ಇದರಲ್ಲಿ ರಸ್ತೆ ಪುನರ್ ಸ್ಥಾಪನೆ / ಅನುಮತಿ ಶುಲ್ಕವು ಸೇರಿರುತ್ತದೆ. ಇದಲ್ಲದೆ, ಭಾರತದಲ್ಲಿ ಕೆಲವು ರಾಜ್ಯಗಳು ಅಳವಡಿಸಿಕೊಂಡಿರುವ ಬೆಸ್ಟ್ ಪ್ರಾಕ್ಟೀಸ್‍ಗಳನ್ನು ಉಲ್ಲೇಖಿಸಿದ್ದು, ಇದರಲ್ಲಿ ಉತ್ತರ ಪ್ರದೇಶದ ರಾಜ್ಯದಲ್ಲಿ ಪ್ರತಿ ಕಿ.ಮೀ.ಗೆ ರೂ 1000/- ಗಳ ಅನುಮತಿ ಶುಲ್ಕವನ್ನು ನಿರ್ದಿಷ್ಟವಾಗಿ ಪಟ್ಟಿ ಮಾಡಲಾಗಿರುತ್ತದೆ.
ಪಿ.ಎನ್.ಜಿ.ಆರ್.ಬಿ ಕಾರ್ಯದರ್ಶಿಗಳ 2021ರ ಸೆಪ್ಟೆಂಬರ್ 15ರ ಪತ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ಸಿ.ಜಿ.ಡಿ ನೀತಿಯನ್ನು ಸೂಕ್ತವಾಗಿ ಅಳವಡಿಸಿಕೊಳ್ಳುವುದನ್ನು ಪರಿಗಣಿಸಲು ವಿನಂತಿಸಿ ಇದು ಸಿ.ಜಿ.ಡಿ ತ್ವರಿತ ಅನುಷ್ಠಾನ ಅನುಮತಿಗಳು / ಅನುಮೋದನೆಗಳನ್ನು ಪಡೆಯುವಲ್ಲಿ ತಪ್ಪಿಸಬಹುದಾದ ವಿಳಂಬವನ್ನು ತಡೆಯುತ್ತದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವರು 2021ನೇ ಅಕ್ಟೋಬರ್ 02 ಪತ್ರದನ್ವಯ ರಸ್ತೆ ಮರು ಸ್ಥಾಪನೆ / ಅನುಮತಿ ಶುಲ್ಕಗಳ ಪ್ರಮಾಣೀಕರವನ್ನು ಒಳಗೊಂಡಂತೆ ಸಿ.ಜಿ.ಡಿ ನೀತಿಯನ್ನು ಬೆಂಬಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವನ್ನು ವಿನಂತಿಸಿರುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಸಮೃದ್ಧ ಹಸಿರು ಮತ್ತು ಸ್ವಚ್ಛ ಪರಿಸರವನ್ನು ತರಲು ನೈಸರ್ಗಿಗಕ ಅನಿಲದ ಬಳಕೆಯನ್ನು ಹೆಚ್ಚಿಸಲು ಮತ್ತು ಅನಿಲ ಆಧಾರಿತ ಆರ್ಥಿಕತೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದ ನೆರವನ್ನು ಕೋರಿರುತ್ತಾರೆ.
ಉತ್ತರ ಪ್ರದೇಶ ಹಾಗೂ ಬೇರೆ ರಾಜ್ಯಗಳಲ್ಲಿರುವ ಇಂತಹ ಪ್ರಗತಿಪರ ಉಪಕ್ರಮಗಳನ್ನು ಗಮನಿಸಿ ರಾಜ್ಯದ ಸಿಜಿಡಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಹಾಗೂ ರಾಜ್ಯದ ನಗರ ಅನಿಲ ಪೈಪ್ ಲೈನ್ ಮೂಲಸೌಕರ್ಯ ವಿತರಣಾ ಜಾಲದ ಅಭಿವೃದ್ಧಿ ನೀತಿಯನ್ನು ರಚಿಸಲಾಗಿದೆ.
ರಾಜ್ಯದಲ್ಲಿ ನೈಸರ್ಗಿಕ ಅನಿಲದ ಬಳಕೆಯನ್ನು ಉತ್ತೇಜಿಸುವುದು ಮತ್ತು ರಾಜ್ಯದಾದ್ಯಂತ ಅನಿಲ ಪೈಪ್‍ಲೈನ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ನೀತಿಯ ಮುಖ್ಯ ಉದ್ದೇಶವಾಗಿದೆ. ನೀತಿಯ ಮೂಲಕ ವಿವಿಧ ಜಿಲ್ಲೆಗಳಲ್ಲಿ ಅನುಮತಿ ಶುಲ್ಕಗಳ ಅಸಮಾನತೆಯನ್ನು ತೆಗೆದುಹಾಕಲು ಮತ್ತು ರಾಜ್ಯದಾದ್ಯಂತ ಏಕ ರೂಪದ ಅನುಮತಿ ಶುಲ್ಕಗಳು ಅನ್ವಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ನಗರ ಅನಿಲ ವಿತರಣಾ ಸಂಸ್ಥೆಗಳು ತಮ್ಮ ಭೌಗೋಳಿಕ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಿಜಿಡಿ ಹಾಗೂ ಅನುಮತಿ ಶುಲ್ಕಗಳಲ್ಲಿನ ಕಡಿತದ ಲಾಭವನ್ನು ಸಾರ್ವಜನಿಕರಿಗೆ ವರ್ಗಾಯಿಸುವ ಷರತ್ತನ್ನು ಈ ನೀತಿಯ ಅಧ್ಯಾಯ 6ರ ಷರತ್ತು (xii) ನಲ್ಲಿ ಸೇರಿಸಲಾಗಿದ್ದು, ಅದರಂತೆ ಸಿಜಿಡಿ ನೀತಿಯನ್ನು ಹೊರಡಿಸಲಾಗಿರುತ್ತದೆ. ಸದರಿ ನೀತಿಯನ್ನು ಹೊರಡಿಸಿದ ನಂತರ ಅನಿಲ ಪೈಪ್ ಅಳವಡಿಕೆಗೆ ಮತ್ತು ಮೇಲ್ವಿಚಾರಣಾ ಶುಲ್ಕಗಳನ್ನು ಮೀಟರ್‍ಗೆ ರೂ 1/-ಕ್ಕೆ ಇಳಿಸುವ ಅನುಗುಣವಾದ ಪ್ರಯೋಜನವನ್ನು ಸಿಜಿಡಿ ಸಂಸ್ಥೆಗಳು ತಮ್ಮ ಭೌಗೋಳಿಕ ಪ್ರದೇಶಗಳಲ್ಲಿ ಪಿ.ಎನ್.ಜಿ ಮತ್ತು ಸಿ.ಎನ್.ಜಿ ಶುಲ್ಕಗಳಲ್ಲಿ ಸಾರ್ವಜನಿಕರಿಗೆ ವರ್ಗಾಯಿಸುವುದುದನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಎರಡಕ್ಕೂ 2023ನೇ ನವೆಂಬರ್ 08ರ ಪತ್ರದ ಮೂಲಕ ವಿನಂತಿಸಲಾಗಿದೆ. ನೀತಿಯ ಉಪಕ್ರಮಗಳಿಂದ ಬರುವ ಲಾಭವನ್ನು ಯಾವುದೇ ಸಿಜಿಡಿ ಸಂಸ್ಥೆಗಳಲ್ಲಿ ಉಳಿಸಿಕೊಳ್ಳದೇ ಸಾರ್ವಜನಿಕರಿಗೆ ವರ್ಗಾಯಿಸಲು ಇದು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಅರ್ಥಿಕ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ನೀತಿಯನ್ನು ಸಿದ್ದಪಡಿಸಲಾಗಿದೆ. ಆರ್ಥಿಕ ಇಲಾಖೆ ಈಗಾಗಲೇ ಸಹಮತಿ ವ್ಯಕ್ತಪಡಿಸಿದೆ. ಸಚಿವ ಸಂಪುಟದ ಅನುಮೋದನೆಯ ಮೇರೆಗೆ ರಾಜ್ಯ ನಗರ ಅನಿಲ ವಿತರಣೆ (ಸಿ.ಜಿ.ಡಿ) ನೀತಿಯನ್ನು ಹೊರಡಿಸಲಾಗಿರುತ್ತದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ಅವ್ಯವಹಾರಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು – ಸಚಿವ ಬಿ.ಎಸ್. ಸುರೇಶ್
ಬೆಂಗಳೂರು, ಮಾರ್ಚ್ 04 (ಕರ್ನಾಟಕ ವಾರ್ತೆ) :
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರಗಳ ಕುರಿತು ಯಾವುದೇ ದೂರುಗಳು ದಾಖಲಾಗಿರುವುದಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ್ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಂ. ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ಇಲ್ಲಿಯ ವರೆಗೂ ಯಾವುದೇ ದೂರುಗಳು ದಾಖಲಾಗಿರುವುದಿಲ್ಲ. ದೂರುಗಳನ್ನು ಬಂದಲ್ಲಿ ಪರಿಶೀಲಿಸಿ ವರದಿಯನ್ನು ನೀಡಲು ಈಗಾಗಲೇ ಸಮಿತಿಯನ್ನು ಸಹ ರಚಿಸಲಾಗಿದೆ. ಸ್ಮಾರ್ಟ್ ಸಿಟಿ ಅಭಿಯಾನದಡಿ ರಾಜ್ಯದ 07 ನಗರಗಳಾದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ – ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ಮತ್ತು ಬೆಂಗಳೂರು ನಗರಗಳು ಆಯ್ಕೆಯಾಗಿರುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿಯವರೆಗೂ ಬಿಡುಗಡೆಯಾದ ರೂ. 6854.5 ಕೋಟಿ ಅನುದಾನದಲ್ಲಿ ರೂ. 6472.08 ಕೋಟಿಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಮೆ.ಶ್ರೀ ಸಿಮೆಂಟ್ ಲಿಮಿಟೆಡ್ ಯೋಜನೆ ರೈತರಿಗೆ ಯಾವುದೇ ತಾರತಮ್ಯವಿಲ್ಲದೆ ಪರಿಹಾರ ನೀಡಲಾಗಿದೆ – ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು, ಮಾರ್ಚ್ 04 (ಕರ್ನಾಟಕ ವಾರ್ತೆ) :
ಮೆ| ಶ್ರೀ ಸಿಮೆಂಟ್ ಲಿಮಿಟೆಡ್ ಘಟಕಕ್ಕೆ ಅನುಷ್ಠಾನಕ್ಕೆ ರೈತರಿಂದ ಪಡೆಯಲಾದ ಭೂಮಿಗೆ ಯಾವುದೇ ತಾರತಮ್ಯವಿಲ್ಲದೆ ಪರಿಹಾರ ಮೊತ್ತವನ್ನು ಪಾವತಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಾ. ತಳವಾರ್ ಸಾಬಣ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು 2010ನೇ ಜನವರಿ 05ರಂದು ಎಸ್.ಎಚ್.ಎಲ್.ಸಿ.ಸಿ ಸಭೆಯಲ್ಲಿ ಮೆ| ಶ್ರೀ ಸಿಮೆಂಟ್ ಲಿಮಿಟೆಡ್ ಘಟಕಕ್ಕೆ ರೂ 100ಕೋಟಿ ಬಂಡವಾಳ ಹೂಡಿಕೆ ಮಾಡಿ 3 ಎಚ್.ಟಿ.ಪಿ.ಎ ಸಿಮೆಂಟ್ ಘಟಕವನ್ನು ಕೊಡ್ಲಾ ಹಾಗೂ ಬೆನಕನಹಳ್ಳಿ ಗ್ರಾಮ ಸೇಡಂ ತಾಲ್ಲೂಕು ಕಲಬುರಗಿ ಜಿಲ್ಲೆ ಇಲ್ಲಿ ಸ್ಥಾಪಿಸಲು ಅನುಮೋದನೆ ನೀಡಿರುತ್ತದೆ.
ಮೆ| ಶ್ರೀ ಸಿಮೆಂಟ್ ಲಿಮಿಟೆಡ್ ಕಲಬುರಗಿ ಜಿಲ್ಲೆ ಅವರು ಅಂದಾಜು 1348.38 ಎಕರೆ ಖಾಸಗಿ ಕೃಷಿ ಭೂಮಿಯನ್ನು ಎಕರೆಗೆ ರೂ. 2.35 ಲಕ್ಷದಂತೆ ಕೆ.ಎಲ್.ಆರ್. ಕಾಯ್ದೆ ಸೆಕ್ಷನ್ 109ರಡಿ ಖರೀದಿಸಿರುತ್ತದೆ. ನಂತರ ರೈತರು ಹೆಚ್ಚಿನ ಭೂ ಪರಿಹಾರ ಕೋರಿದ್ದರಿಂದ, ಈ ವಿಷಯವಾಗಿ ರೈತರೊಂದಿಗೆ ಚರ್ಚಿಸಿ ಪ್ರತಿ ಎಕರೆಗೆ ರೂ. 3.65 ಲಕ್ಷ ಹೆಚ್ಚುವರಿ ಪರಿಹಾರವಾಗಿ ಪಾವತಿಸಲಾಗಿರುತ್ತದೆ. ತದ ನಂತರ ಮೆ| ಶ್ರೀ ಸಿಮೆಂಟ್ ಲಿಮಿಟೆಡ್ ಯೋಜನೆಯ ಅನುಷ್ಠಾನದ ಸಮಯದಲ್ಲಿ ರೈತರು ಮತ್ತೆ ಹೆಚ್ಚುವರಿ ಭೂ ಪರಿಹಾರ ಬೇಡಿಕೆ ಕೋರಿದ್ದರಿಂದ ಕಂಪನಿಯು ಮಾನವೀಯ ನೆಲೆಯಲ್ಲಿ ಪರಿಗಣಿಸಿ ಮತ್ತು ಆ ಪ್ರದೇಶದಲ್ಲಿ ಶಾಂತಿ ಕಾಪಾಡಲು ಗುಲ್ಬರ್ಗ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಹೆಚ್ಚುವರಿ ಪರಿಹಾರವನ್ನು ಪ್ರತಿ ಎಕರೆಗೆ ರೂ 2 ಲಕ್ಷಗಳನ್ನು ನೀಡಿರುತ್ತದೆ. ಹೀಗೆ ಒಟ್ಟಾರೆಯಾಗಿ 3 ಕಂತುಗಳಲ್ಲಿ ಪ್ರತಿ ಎಕರೆಗೆ ರೂ. 8,00,000/-ಗಳ ಭೂ ಪರಿಹಾರವನ್ನು ನೀಡಿರುವುದಾಗಿ ಘಟಕದವರು ತಿಳಿಸಿರುತ್ತಾರೆ.
ರೈತರಿಗೆ ಹೆಚ್ಚುವರಿ ಭೂ ಪರಿಹಾರವನ್ನು ಈಗಾಗಲೇ ಪಾವತಿಸಲಾಗಿರುತ್ತದೆ ಮತ್ತು ಕಂಪನಿಯು ಭೂಮಿಯನ್ನು ಖರೀದಿಸಿರುವುದರಿಂದ ಆ ಭೂಮಿಗಳ ಬೆಳೆ ಪರಿಹಾರ ಅನ್ವಯಿಸುವುದಿಲ್ಲ. ರೈತರು ಮತ್ತು ಕಂಪನಿಯ ನಡುವಿನ ಒಪ್ಪಂದದ ಪ್ರಕಾರ ಕಂಪನಿಯು 483 ಭೂ ಸಂತ್ರಸ್ತರಿಗೆ ಉದ್ಯೋಗ ಒದಗಿಸಬೇಕಾಗಿದ್ದು, ಇಲ್ಲಿಯವರೆಗೆ 328 ಭೂ ಸಂತ್ರಸ್ತರಿಗೆ ಉದ್ಯೋಗ ಒದಗಿಸಿರುತ್ತದೆ. ಬಾಕಿ 145 ಭೂ ಸಂತ್ರಸ್ತರಿಗೆ ಅರ್ಹತೆ, ವಯಸ್ಸು, ಮಾನದಂಡಗಳ ಮೇರೆಗೆ ಉದ್ಯೋಗವನ್ನು ನೀಡಬೇಕಾಗಿರುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಲಬುರಗಿ ಅವರು ಈ ಘಟಕದ ಚಟುವಟಿಕೆಯಿಂದ ಉಂಟಾಗಿರುವ ಧೂಳಿನಿಂದ ಬೆಳೆಗಳ ಹಾನಿ ಕುರಿತು ವರದಿ ನೀಡುವಂತೆ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ, ಸೇಡಂ ಇವರಿಗೆ ಪತ್ರವನ್ನು ಬರೆದಿರುತ್ತಾರೆ. ವರದಿ ನಿರೀಕ್ಷಣೆಯಲ್ಲಿದೆ. ವರದಿ ಬಂದ ನಂತರ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಕ್ರಮ ಮಧ್ಯ ಮಾರಾಟ ತಡೆಗೆ ಕ್ರಮ : ಸಚಿವ ಎಚ್.ಕೆ.ಪಾಟೀಲ್
ಬೆಂಗಳೂರು ಮಾರ್ಚ್ 04 (ಕರ್ನಾಟಕ ವಾರ್ತೆ)
ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಲು ಅಬಕಾರಿ ಇಲಾಖೆಯಿಂದ ವಲಯ ವ್ಯಾಪ್ತಿಯ ರೂಟ್‍ಗಳಲ್ಲಿ ನಿರಂತರವಾಗಿ ಗಸ್ತು ನಡೆಸಲಾಗುತ್ತಿದೆ. ಗಸ್ತಿನ ಸಮಯದಲ್ಲಿ ಮತ್ತು ಸಾರ್ವಜನಿಕರಿಂದ ವಿಶೇಷವಾಗಿ ಮಹಿಳೆ / ಮಹಿಳಾ ಸಂಘಗಳಿಂದ ದೂರುಗಳು ಸ್ವೀಕೃತವಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿ, ಅಕ್ರಮಗಳು ಕಂಡುಬಂದಲ್ಲಿ ಅಬಕಾರಿ ಕಾಯ್ದೆ ಮತ್ತು ನಿಯಮಗಳನುಸಾರ ಪ್ರಕರಣಗಳನ್ನು ದಾಖಲಿಸಿ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ವಹಿಸಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ತಿಳಿಸಿದರು
ಇಂದು ವಿಧಾನಸಭೆಯಲ್ಲಿ ಬೈಲಹೊಂಗಲ ಶಾಸಕರಾದ ಕೌಜಲಗಿ ಮಹಾಂತೇಶ್ ಶಿವಾನಂದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲಾ ಮದ್ಯ ಮಾರಾಟ ಸನ್ನದುಗಳನ್ನು ನಿಯಮಿತವಾಗಿ ಮಾಸಿಕವಾಗಿ ಪರಿಶೀಲಿಸಲಾಗುತ್ತಿದ್ದು ಕಾಯ್ದೆ/ನಿಯಮ/ಸನ್ನದು ಷರತ್ತು ಉಲ್ಲಂಘನೆಯಾದಲ್ಲಿ ಅಂತಹ ಸನ್ನದುದಾರರ ವಿರುದ್ಧ ಅಬಕಾರಿ ಕಾಯ್ದೆ ಪ್ರಕರಣ ದಾಖಲಿಸಲಾಗುತ್ತಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ರಸ್ತೆಗಾವಲು ನಡೆಸಿ ಸಂಶಯಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಸಭೆಯನ್ನು ಏರ್ಪಡಿಸಿ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಕ್ರಮ ಅತ್ತಿಕ್ಕಲು ಕ್ರಮ ವಹಿಸಲು ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಸಂರಕ್ಷಣಾಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗ್ರಾಮ ಸಭೆಗಳಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಶಾಲಾ/ಕಾಲೇಜುಗಳಲ್ಲಿ ಮದ್ಯ ವ್ಯಸನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಕ್ರಮ ವಹಿಸಲಾಗಿದೆ. ಅಲ್ಲದೇ 2024-25ನೇ ಸಾಲಿನ ಜನವರಿ ಅಂತ್ಯದವರೆಗೆ 17,390 ಮೊಕದ್ದಮೆಗಳನ್ನು ದಾಖಲಿಸಿ ಅದೇ ಅವಧಿಯಲ್ಲಿ 18,253 ಆರೋಪಿತರನ್ನು ದಸ್ತಗಿರಿಗೊಳಪಡಿಸಲಾಗಿರುತ್ತದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ವಿಧಾನಸಭೆಯಲ್ಲಿ ಉತ್ತರಿಸಿದರು.
ಕರಾವಳಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ವಿಶೇಷ ಗಮನ : ಸಚಿವ ಎಚ್.ಕೆ.ಪಾಟೀಲ್
ಬೆಂಗಳೂರು ಮಾರ್ಚ್ 04 (ಕರ್ನಾಟಕ ವಾರ್ತೆ)
ಕರಾವಳಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ವಿಶೇಷ ಗಮನ ಹರಿಸಲು ಪ್ರವಾಸೋದ್ಯಮ ನೀತಿಯ ಅವಧಿಯಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗುವುದು ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಕರಾವಳಿ ಕರ್ನಾಟಕವನ್ನು ಉತ್ತಮ ಗುಣಮಟ್ಟದ ತಾಣವಾಗಿ ಸುಸ್ಥಿರವಾಗಿ ಅಭಿವೃದ್ಧಿಪಡಿಸಲು ಪ್ರಯತ್ನಗಳನ್ನು ಮಾಡಲಾಗುವುದು. ಕರ್ನಾಟಕ ಸರ್ಕಾರವು ರಾಜ್ಯದ ಸಮಗ್ರ 320 ಕಿಮೀ ಉದ್ದದ ಕರಾವಳಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯವಾದ ಒತ್ತು ನೀಡಲು ವಿಶೇಷ ಹಣಕಾಸು ಪ್ಯಾಕೇಜುಗಳನ್ನು ಸೃಜಿಸಲಾಗುವುದು ಎಂದು ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರಾವಳಿ ಕರ್ನಾಟಕವು 2023ರಲ್ಲಿ 8 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಕಂಡಿದೆ. ಕರ್ನಾಟಕದ ಒಟ್ಟು ಪ್ರವಾಸಿಗರ ಸಂಖ್ಯೆಯಲ್ಲಿ ಕರಾವಳಿ ಕರ್ನಾಟಕಕ್ಕೆ, ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸುಮಾರು ಶೇಕಡ 12 ರಿಂದ 15ರಷ್ಟಿದ್ದು, ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಅಪಾರ ಸಾಮರ್ಥ್ಯವಿದೆ. ಕರಾವಳಿ ಕರ್ನಾಟಕದ ಕಾರ್ಯಚಟುವಟಿಕೆಗಳನ್ನು ಯೋಜಿಸಲು ಮತ್ತು ಚಾಲನೆಗೊಳಿಸಲು ಅದಕ್ಕಾಗಿಯೇ ಸಮರ್ಪಿತವಾದ ಕರಾವರಳಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗುವುದು. ಕರಾವಳಿ ಅಭಿವೃದ್ಧಿಗಾರಿ ವಿಶೇಷ ಉಪಕ್ರಮಗಳನ್ನು ಕೈಗೊಳ್ಳಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚುವರಿ ಪ್ರೋತ್ಸಾಹವನ್ನು ನೀಡಲು ಕರಾವಳಿ ಅಭಿವೃದ್ಧಿ ಮಂಡಳಿಗೆ ಅಧಿಕಾರ ನೀಡಲಾಗುತ್ತದೆ. ಕರಾವಳಿ ಕರ್ನಾಟಕದಲ್ಲಿ ಯೋಜಿತ ಮತ್ತು ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಸಮುದಾಯದ ಸಹಭಾಗಿತ್ವದ ಸಮನ್ವಯತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಕರಾವಳಿ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗುವುದು ಹಾಗೂ ಕರಾವಳಿ ಕರ್ನಾಟಕದ ಯೋಜಿತ ಅಭಿವೃದ್ಧಿ ಮತ್ತು ಸಿಆರ್‍ಝಡ್ ಮಾನದಂಡಗಳೊಂದಿಗೆ ಕರ್ನಾಟಕ ಕರಾವಳಿ ಪಟ್ಟಣಗಳು ಮತ್ತು ಕಡಲ ತೀರಗಳಾದ್ಯಂತ ಪ್ರವಾಸೋದ್ಯಮ ಕೊಡುಗೆಗಳನ್ನು ಸಂಪರ್ಕಿಸುವಂಥ ಕರಾವಳಿ ವಲಯಗಳನ್ನು ಅಭಿವೃಧ್ಧಿಪಡಿಸುತ್ತದೆ. ಪ್ರವಾಸೋದ್ಯಮ ಯೋಜನೆಗಳನ್ನು ಎಲ್ಲೆಲ್ಲಿ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಮಾರ್ಗದರ್ಶನವಾಗಿ ಕಾಯನಿರ್ವಹಿಸಲು ಯೋಜಿತ ರೀತಿಯಲ್ಲಿ ಸಂಪರ್ಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ವಿಧಾನಸಭೆಯಲ್ಲಿ ಉತ್ತರಿಸಿದರು.
ಬಾಗೇಪಲ್ಲಿ ತಾಲ್ಲೂಕು ಕ್ರೀಡಾಂಗಣದ ಸೌಲಭ್ಯಗಳ ಉನ್ನತೀಕರಣ- ಸಚಿವ ಬೈರೇಗೌಡ
ಬೆಂಗಳೂರು, ಮಾರ್ಚ್ 04 (ಕರ್ನಾಟಕ ವಾರ್ತೆ)
ಬಾಗೇಪಲ್ಲಿ ತಾಲ್ಲೂಕಿನ ಕ್ರೀಡಾಂಗಣದ ಸೌಲಭ್ಯಗಳ ಉನ್ನತೀಕರಣಕ್ಕಾಗಿ 2024-25ನೇ ಸಾಲಿಲ್ಲಿ ರೂ. 300.00ಲಕ್ಷ ವೆಚ್ಚದಲಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ಬಾಗೇಪಲ್ಲಿ ಶಾಸಕರಾದ ಸುಬ್ಬಾರೆಡಡಿ ಎಸ್.ಎನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಗೇಪಲ್ಲಿ ತಾಲ್ಲೂಕು ಕ್ರೀಡಾಂಗಣದ ಸೌಲಭ್ಯಗಳ ಉನ್ನತೀಕರಣಕ್ಕಾಗಿ ಈಗಾಗಲೇ ಇರುವ ಸೌಲಭ್ಯಗಳ ಜೊತೆಗೆ ಬೋರ್ ವೆಲ್ ಕೊರೆದು, ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವುದು, ಕಾಂಪೌಂಡ್ ಗೋಡೆ ನಿರ್ಮಾಣ, ಮಳೆ ನೀರು ಚರಂಡಿ ನಿರ್ಮಿಸುವುದರ ಜೊತೆಗೆ ಗುಡಿಬಂಡೆ ತಾಲ್ಲೂಕಿನ ಅಮಾನಿಬೈರ ಸಾಗರ ಗ್ರಾಮದಲ್ಲಿ 6.00 ಎಕರೆ ನಿವೇಶವನ್ನು ಗುರುತಿಸಿದ್ದು, ತಾಲ್ಲೂಕು ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಾಗಿದ್ದು ಇದನ್ನು ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವರು ವಿಧಾನಸಭೆಯಲ್ಲಿ ಉತ್ತರಿಸಿದರು.