ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2025-26ನೇ ಸಾಲಿನ ಬಜೆಟ್ ಅನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್. ತಂಗಡಗಿ ಸರ್ವರಿಗೂ ಸಮಾನ ಹಿತರಕ್ಷಣೆಯ ಬಜೆಟ್ ಎಂದು ಶ್ಲಾಘಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದನ್ನು ಐತಿಹಾಸಿಕ ಹಾಗೂ ಆರ್ಥಿಕ ಶಿಸ್ತಿನಿಂದ ಕೂಡಿದ ಜನಕೇಂದ್ರಿತ ಕಲ್ಯಾಣ ಕಾರ್ಯಕ್ರಮಗಳ ಸಂಕಲನವೆಂದು ವರ್ಣಿಸಿದರು. ವಿಶೇಷವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ಮತ್ತು ಕೆಎಸ್‌ಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ಉಚಿತ ತರಬೇತಿ ನೀಡಲು ಬೆಂಗಳೂರಿನಲ್ಲಿ ಎರಡು ಸುಸಜ್ಜಿತ ವಸತಿ ನಿಲಯಗಳನ್ನು ಸ್ಥಾಪಿಸುವ ನಿರ್ಧಾರವನ್ನು ಅವರು ಅಭಿನಂದಿಸಿದರು.
ಬಜೆಟ್‌ನಲ್ಲಿ ಕೈಗಾರಿಕಾ ವಲಯಕ್ಕೂ ವಿಶೇಷ ಗಮನ ಹರಿಸಲಾಗಿದ್ದು, ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ -1, ಪ್ರವರ್ಗ -2ಎ ಮತ್ತು 2ಬಿ ಸಮುದಾಯಗಳಿಗೆ ಶೇ.20 ರಷ್ಟು ಭೂಮಿ ಮೀಸಲಾತಿ ನೀಡಲಾಗಿದೆ. ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಜನರ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೂ ಮಹತ್ವ ನೀಡಲಾಗಿದ್ದು, ಕೃಷಿ ಭಾಗ್ಯ ಯೋಜನೆಯಡಿ 12,000 ಕೃಷಿ ಹೊಂಡಗಳ ನಿರ್ಮಾಣ, ತೊಗರಿ ಬೆಳೆ ಉತ್ತೇಜನ, ಹೈನುಗಾರಿಕೆ, ಸಮಾಜ ಕಲ್ಯಾಣ, ಮೂಲಸೌಲಭ್ಯ, ಕೈಗಾರಿಕೆ, ಶಿಕ್ಷಣ, ಮಹಿಳಾ ಸಬಲೀಕರಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ.
ಬಜೆಟ್ ತಯಾರಿಯಲ್ಲಿ ರೈತರಿಂದ ಹಿಡಿದು ಎಲ್ಲ ವರ್ಗದವರ ಅಭಿಪ್ರಾಯ ಸಂಗ್ರಹಿಸಿ, ಆರ್ಥಿಕ ಶಿಸ್ತನ್ನು ಕಾಪಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸುವುದು ಸರ್ಕಾರದ ಧ್ಯೇಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.