ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಮತ್ತೊಂದು ದೊಡ್ಡ ಮಟ್ಟದ ಆಸ್ತಿ ತೆರಿಗೆ ಹಗರಣ ಬೆಳಕಿಗೆ ಬಂದಿದೆ. ಈ ಹಗರಣವನ್ನು ಬಯಲಿಗೆ ತಂದವರು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮೂನಿಷ್ ಮೌದ್ಗಿಲ್.
50 ಕೋಟಿ ತೆರಿಗೆ ವಂಚನೆ – ಹಗರಣದ ರೂವಾರಿ ಪತ್ತೆ
ಈ ಹಗರಣದಲ್ಲಿ ಮಹಾದೇವಪುರ ವಲಯದ ಕಂದಾಯ ಅಧಿಕಾರಿ ಬಸವಾಚಾರಿ ಪ್ರಮುಖ ಪಾತ್ರವಹಿಸಿದ್ದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ. ವೈದೇಹಿ ಆಸ್ಪತ್ರೆ ಸುಮಾರು ₹50 ಕೋಟಿ ಆಸ್ತಿ ತೆರಿಗೆ ಬಾಕಿ ಇರುವಾಗಲೂ, ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ, ಹಗರಣಕ್ಕಾಗಿ ಕಡತವನ್ನೇ ಒಂದು ವರ್ಷದಿಂದ ಬಚ್ಚಿಟ್ಟುಕೊಂಡಿದ್ದರು!
ಹಗರಣ ಇನ್ನಷ್ಟು ಗಂಭೀರವಾಗುವುದಾದರೆ, ಬಿಬಿಎಂಪಿ ಬಾಕಿ ತೆರಿಗೆ ಪಾವತಿಸಬೇಕಾದ ಸಂಸ್ಥೆಗಳ ಪಟ್ಟಿಯಲ್ಲಿ ವೈದೇಹಿ ಆಸ್ಪತ್ರೆಯ ಹೆಸರು ಕಾಣಿಸದಂತೆ ಖತರ್ನಾಕ್ ಪ್ಲಾನ್ ಮಾಡಿದ್ದರೆಂಬುದು ಬೆಳಕಿಗೆ ಬಂದಿದೆ.
ಮೂನಿಷ್ ಮೌದ್ಗಿಲ್ ನಿಖರ ಪರಿಶೀಲನೆಯಿಂದ ವಂಚನೆ ಬಯಲು
ಬಿಬಿಎಂಪಿಯ ಮುಖ್ಯ ಆದಾಯ ಮೂಲವೇ ಆಸ್ತಿ ತೆರಿಗೆ. ಆದರೆ, ಬಸವಾಚಾರಿ ಮತ್ತು ಅವನ ಕೈಗಣೇಶ್‌ಗಳು ಬಿಬಿಎಂಪಿಯ ಬೊಕ್ಕಸ ಭರ್ತಿಯಾಗಲು ತಡೆನಿಲ್ಲವಂತೆ 50 ಕೋಟಿ ರೂ. ತೆರಿಗೆ ವಂಚನೆ ನಡೆಸಿದ್ದರು.
ಈ ವಂಚನೆ ಕಣ್ತುಂಬಿಕೊಂಡ ಖಡಕ್ ಅಧಿಕಾರಿಯಾಗಿರುವ ಮೂನಿಷ್ ಮೌದ್ಗಿಲ್, ದೀರ್ಘ ಕಾಲದ ಪರಿಶೀಲನೆ, ದಾಖಲೆಗಳ ಪರಿಶೋಧನೆ ನಡೆಸಿ, ಈ ಬೃಹತ್ ಹಗರಣವನ್ನು ಬಯಲಿಗೆ ತಂದಿದ್ದಾರೆ. ಪಾಲಿಕೆಯ ಹಣ ಹೆಚ್ಚಿಸಲು ಅವರು ರಾತ್ರಿ-ಹಗಲು ದುಡಿಯುತ್ತಾ ಈ ಪ್ರಕರಣವನ್ನು ಪತ್ತೆ ಮಾಡಿದ್ದಾರೆ.
ಅಧಿಕಾರಿಯ ಅಮಾನತು ಶಿಫಾರಸ್ಸು!
ಹಗರಣ ಬಹಿರಂಗಗೊಂಡ ತಕ್ಷಣ, ಕಂದಾಯ ವಿಭಾಗದ ವಿಶೇಷ ಆಯುಕ್ತ ಮೂನಿಷ್ ಮೌದ್ಗಿಲ್, ವಂಚಕ ಬಸವಾಚಾರಿಯನ್ನು ಅಮಾನತು ಮಾಡಬೇಕೆಂದು ಶಿಫಾರಸ್ಸು ಮಾಡಿದ್ದಾರೆ. ಇದೀಗ ಈ ಹಗರಣ ಸಂಬಂಧಿಸಿದಂತೆ ಹೆಚ್ಚು ತನಿಖೆ ನಡೆಯುವ ಸಾಧ್ಯತೆ ಇದೆ.
ಬಿಬಿಎಂಪಿಯಲ್ಲಿ ಹೀಗೆ ಆಸ್ತಿ ತೆರಿಗೆ ವಂಚನೆ ನಡೆಯುತ್ತಿದೆಯೇ? ಇನ್ನೂ ಎಷ್ಟು ಹಗರಣಗಳಿವೆ? ಎಂಬ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ. ಈ ಪ್ರಕರಣ ಇನ್ನಷ್ಟು ಅಧ್ಯಯನಕ್ಕೆ ಒಳಗಾದರೆ, ಹಳೇ ವಂಚನೆಗಳೂ ಹೊರಬರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದೀಗ, ಈ ಹಗರಣವನ್ನು ಬಯಲಿಗೆ ತಂದ ಮೂನಿಷ್ ಮೌದ್ಗಿಲ್ ಅವರ ನಿರ್ಧಾರವನ್ನು ಸಾರ್ವಜನಿಕರು ಅಭಿನಂದಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದರೆ, ಅವರನ್ನು ಕೂಡಾ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಪ್ರಜೆಯ ಮನವಿ.