ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ತೊಗರಿ ಖರೀದಿಯ ನೋಂದಣಿ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಈವರೆಗೆ ನೋಂದಣಿ ಮಾಡಿಸದ ರೈತರು ತಕ್ಷಣವೇ ಸಮೀಪದ ಪ್ರಾಥಮಿಕ ಪತ್ತಿನ ಸಹಕಾರ ಸಂಘ, ರೈತ ಉತ್ಪಾದಕರ ಕಂಪನಿ ಅಥವಾ ತಾಲೂಕು ಹುಟ್ಟುವಳಿ ಸಹಕಾರ ಸಂಘಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ತೊಗರಿಗೆ ಪ್ರತಿ ಕ್ವಿಂಟಲ್‌ಗಾಗಿ ₹7,550 ಬೆಲೆ ನಿಗದಿಪಡಿಸಿದ್ದು, ರಾಜ್ಯ ಸರ್ಕಾರವು ಅದಕ್ಕೆ ₹450 ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು. ಆದಾಗ್ಯೂ, ಕೆಲವೆಡೆ ಈ ಪ್ರೋತ್ಸಾಹ ಧನ ರೈತರಿಗೆ ಸರಿಯಾಗಿ ದೊರಕುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಈ ತೊಂದರೆಯನ್ನು ಸರಿಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ರೈತರಿಗೆ ಪ್ರತಿ ಕ್ವಿಂಟಲ್‌ಗೆ ಒಟ್ಟು ₹8,000 ಪಾವತಿ ಮಾಡಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.