ಬೆಂಗಳೂರು: ಮುಂದಿನ ಮಾರ್ಚ್ 30 ರಂದು ಯುಗಾದಿ ಹಬ್ಬವಿದ್ದು, ಅದರ ಮರುದಿನ ಹೊಸತೊಡಕು ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಹಿಂದೂ ಸಮುದಾಯದ ಜನರು ಹಲಾಲ್ ಮಾಂಸದ ಬದಲು ಜಟ್ಕಾ ಮಾಂಸವನ್ನು ಖರೀದಿಸಬೇಕು ಎಂದು ಹಿಂದೂ ಸಂಘಟನೆಗಳು ಕರೆ ನೀಡಿವೆ.
ಈ ಕುರಿತು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶರತ್ ಕುಮಾರ್ ಮಾತನಾಡಿ, “ಯುಗಾದಿಯ ಮರುದಿನ ಮೈಲಾರ, ಕಾಲಭೈರವ, ಹುಲಿಯರಾಯ, ಬೀರಪ್ಪ ಜಾತ್ರೆ, ಕುಲದೇವತೆಗಳಿಗೆ ಮಾಂಸಹಾರ ನೈವೇದ್ಯ ಮಾಡುವ ಪದ್ಧತಿ ಇದೆ. ಈ ಸಂದರ್ಭದಲ್ಲಿ ಹಲಾಲ್ ಮಾಂಸದ ಬಳಕೆ ಹಿಂದೂ ಧಾರ್ಮಿಕ ಆಚರಣೆಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಹಿಂದೂ ಸಮುದಾಯವು ಜಟ್ಕಾ ಮಾಂಸವನ್ನು ಬಳಸಿ ತನ್ನ ಸಂಪ್ರದಾಯವನ್ನು ಉಳಿಸಬೇಕು,” ಎಂದು ಹೇಳಿದರು.
ಜಟ್ಕಾ ಮಾಂಸಕ್ಕೆ ಸರಕಾರದಿಂದ ಸಹಕಾರವೇಕೆ?
ಜಟ್ಕಾ ಮಾಂಸದ ಲಭ್ಯತೆಯ ಸಮಸ್ಯೆಯನ್ನು ಉಲ್ಲೇಖಿಸಿದ ಶರತ್ ಕುಮಾರ್, “ರಾಜ್ಯ ಸರ್ಕಾರವು ಹಿಂದೂಗಳ ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಜಟ್ಕಾ ಮಾಂಸವು ಎಲ್ಲ ಕಡೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಹಲಾಲ್ ಪ್ರಮಾಣಪತ್ರದ ವಿರುದ್ಧ ಪ್ರತಿಭಟನೆ
ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮುಖಂಡರು ಹಲಾಲ್ ಪ್ರಮಾಣಪತ್ರದ ವಿರುದ್ಧವೂ ಮಾತನಾಡಿದರು. “ಹಲಾಲ್ ಪ್ರಮಾಣಪತ್ರದ ಮೂಲಕ ದೇಶದ 4 ಲಕ್ಷ ಕೋಟಿ ರೂಪಾಯಿಯ ಮಾಂಸದ ವ್ಯಾಪಾರ ಒಂದು ಸಮುದಾಯದ ಏಕಸ್ವಾಮ್ಯಕ್ಕೆ ಒಳಗಾಗುತ್ತಿದೆ. ಇದರಿಂದ ಹಿಂದುಳಿದ ವರ್ಗದ ಸಮುದಾಯಗಳಿಗೆ ಆರ್ಥಿಕ ಹಾನಿ ಉಂಟಾಗಿದೆ. ಉತ್ತರ ಪ್ರದೇಶ ಸರ್ಕಾರ ಹಲಾಲ್ ಪ್ರಮಾಣಪತ್ರದ ಮೇಲೆ ನಿಷೇಧ ಹೇರಿರುವಂತೆ ಕರ್ನಾಟಕವೂ ಈ ನಿರ್ಧಾರ ಕೈಗೊಳ್ಳಬೇಕು,” ಎಂದು ಅವರು ಒತ್ತಾಯಿಸಿದರು.
ಸಮಾಜದ ವಿವಿಧ ಹಂತಗಳಿಂದ ಬೆಂಬಲ
ಈ ಸುದ್ದಿಗೋಷ್ಠಿಯಲ್ಲಿ ಹಿಂದೂ ಮುಖಂಡರಾದ ಎಂ.ಎಲ್. ಶಿವಕುಮಾರ್, ಹಿಂದವೀ ಜಟ್ಕಾ ಮೀಟ್‌ನ ಮಾಲೀಕ ಮುನೆ ಗೌಡ, ಅಖಿಲ ಭಾರತೀಯ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಡಾ. ಬಿ.ಎನ್. ಮಹೇಶ್ ಕುಮಾರ್ ಮತ್ತು ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಉಪಸ್ಥಿತರಿದ್ದರು.
ಹಲಾಲ್ ನಿಯಮಗಳ ವಿರುದ್ಧ ಕಠಿಣ ಕ್ರಮದ ಆಗ್ರಹ
ಸಂಘಟನೆಗಳ ಪ್ರಕಾರ, ಹಲಾಲ್ ಪ್ರಮಾಣಪತ್ರದ ಮೂಲಕ ಜಮಿಯತ್ ಉಲೇಮಾ ಹಿಂದ್ ಸಂಘಟನೆ ನೂರಾರು ಕೋಟಿ ರೂಪಾಯಿ ಸಂಗ್ರಹಿಸುತ್ತಿದೆ ಮತ್ತು ಇದು ಸಂವಿಧಾನಬಾಹಿರವಾಗಿದೆ. “ಹಲಾಲ್ ಪ್ರಮಾಣಪತ್ರದ ಮೂಲಕ ದೇಶದಲ್ಲಿ ಪ್ರತ್ಯೇಕ ಇಸ್ಲಾಮಿಕ್ ಆರ್ಥಿಕ ವ್ಯವಸ್ಥೆ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ತಕ್ಷಣವೇ ನಿಷೇಧಿಸಬೇಕು,” ಎಂದು ಹಿಂದೂ ಜನಜಾಗೃತಿ ಸಮಿತಿಯ ನಾಯಕರು ಆಗ್ರಹಿಸಿದರು.
ಈ ಘೋಷಣೆ ಹಿನ್ನೆಲೆ ರಾಜ್ಯದಲ್ಲಿ ಹಲಾಲ್ ವಿರುದ್ಧದ ಚರ್ಚೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.