ಬೆಂಗಳೂರು: ನಗರದ ಯಲಹಂಕ ನ್ಯೂ ಟೌನ್ ನ ಅಟ್ಟೂರು ಲೇಔಟ್ ನಲ್ಲಿ ಸಿಸಿಬಿ ಮತ್ತು ಮಾದಕ ದ್ರವ್ಯ ನಿಗ್ರಹ ದಳ (ಎನ್‌ಡಿಪಿಎಸ್) ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 27 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ಲಾಡ್ಜ್ ಒದರಲ್ಲಿ ದಾಳಿ ನಡೆಸಿದ ಪೊಲೀಸರು, ಎಂಟು ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮೂಲತಃ ಕೇರಳದವರಾಗಿದ್ದು, ಬೆಂಗಳೂರಿಗೆ ಕೆಲಸಕ್ಕಾಗಿ ಬಂದಿದ್ದರು. ಆದರೆ, ಅವರು ಮೋಜಿನ ಜೀವನ ನಡೆಸುವ ಉದ್ದೇಶದಿಂದ ಡ್ರಗ್ ಪೆಡ್ಲಿಂಗ್‌ಗೆ ತೊಡಗಿದ್ದರು ಎನ್ನಲಾಗಿದೆ.
ಪೊಲೀಸರ ದಾಳಿಯಲ್ಲಿ 110 ಗ್ರಾಂ ಎಂಡಿಎಂಎ ಕ್ರಿಸ್ಟಲ್, 10 ಮೊಬೈಲ್ ಫೋನ್, 1 ಲ್ಯಾಪ್‌ಟಾಪ್ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಂದಾಜು 15 ಸಾವಿರದಿಂದ 25 ಸಾವಿರ ರೂ. ದರದಲ್ಲಿ ಎಂಡಿಎಂಎ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿಬಿಟಿ ಉದ್ಯೋಗಿಗಳು ಅವರ ಪ್ರಮುಖ ಗುರಿಯಾಗಿದ್ದರು ಎನ್ನಲಾಗಿದೆ.
ಬಂಧಿತರನ್ನು ಪೊಲೀಸ್ ವಶದಲ್ಲಿ ಇಟ್ಟು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಡ್ರಗ್ ಚಟುವಟಿಕೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.